ಗುಳೇದಗುಡ್ಡ:ರಾಜ್ಯದ ಹಲವೆಡೆಗಳಲ್ಲಿ ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚುತ್ತಿರುವ ಸುದ್ದಿ ಕೇಳುತ್ತಿರುವ ಸನ್ನಿವೇಶದಲ್ಲಿ ಇಲ್ಲೊಂದು ಸರ್ಕಾರಿ ಶಾಲೆಗೆ ಮಕ್ಕಳ ಸಂಖ್ಯೆ ಅಧಿಕವಾಗುತ್ತಿರುವ ಪರಿಣಾಮ ಗ್ರಾಮಸ್ಥರು ತಾವೇ ದೇಣಿಗೆ ಸಂಗ್ರಹಿಸಿ ಶಾಲೆ ಕೊಠಡಿ ನಿರ್ಮಿಸುವ ಮೂಲಕ ಮಾದರಿಯಾಗಿದ್ದಾರೆ.
ತಾಲೂಕಿನ ಹುಲ್ಲಿಕೇರಿ ಎಸ್.ಪಿ. ಗ್ರಾಮದ ಗೆಳೆಯರು ಹಾಗೂ ಎಸ್ಡಿಎಂಸಿ ಸದಸ್ಯರು ಎರಡು ಕೊಠಡಿ ನಿರ್ಮಾಣಕ್ಕೆ ಮುಂದಾಗಿದ್ದು, ಕಾಲಂ ಹಾಕಿ ಗೋಡೆ ನಿರ್ಮಾರ್ಣ ಮಾಡುತ್ತಿದ್ದಾರೆ. ತಾತ್ಕಾಲಿಕವಾಗಿ ಮೇಲ್ಛಾವಣಿಗೆ ತಗಡಿನ ಶೀಟ್ ಅಳವಡಿಸಿ, ಮುಂದಿನ ದಿನದಲ್ಲಿ ಆರ್ಸಿಸಿ ಮೇಲ್ಛಾವಣಿ ಹಾಕಿಸಲು ನಿರ್ಧರಿಸಲಾಗಿದೆ.
ಹುಲ್ಲಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 8ನೇ ತರಗತಿ ವರೆಗೆ ಒಟ್ಟು 386 ಮಕ್ಕಳು ಕಲಿಯುತ್ತಿದ್ದಾರೆ. 11 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಧಾನಮಂತ್ರಿ ಪಿಎಂ ಶ್ರೀ ಯೋಜನೆ ಅಡಿಯಲ್ಲಿ ಎಲ್ಕೆಜಿ, ಯುಕೆಜಿ ಇಂಗ್ಲಿಷ್ ಶಾಲೆ ಆರಂಭವಾಯಿತು. ಜೊತೆಗೆ ಸರ್ಕಾರ ಆಗಸ್ಟ್ನಿಂದಲೇ 9 ತರಗತಿ ಕೂಡಾ ಆರಂಭಿಸುವಂತೆ ಆದೇಶಿಸಿತು. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿ ಕೊಠಡಿ ಸಮಸ್ಯೆ ಕಾಡುವ ಸಾಧ್ಯತೆ ಅಧಿಕವಾಗಿದ್ದರಿಂದ ಸರ್ಕಾರದ ಎದುರು ಮಂಡಿಯೂರುವ ಬದಲು ತಾವೇ ಸ್ವತ@ ಕೊಠಡಿ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.
ಎಸ್ಡಿಎಂಸಿ ಅಧ್ಯರು, ಉಪಾಧ್ಯರು, ಸದಸ್ಯರು, ಸ್ನೇಹಿತರ ಒಕ್ಕೂಟ, ಕೆಲ ಸರ್ಕಾರಿ ನೌಕರರು ಸಭೆ ಸೇರಿ ಶಾಲಾ ಕಟ್ಟಡದ ಮೇಲ್ಛಾವಣಿ ಮೇಲೆ ಕೊಠಡಿ ನಿರ್ಮಾಣ ಮಾಡುವ ನಿರ್ಧರಿಸಿ, ವಸ್ತು ರೂಪದಲ್ಲಿ ದೇಣಿಗೆ ಸಂಗ್ರಹಿಸಿ ಎರಡು ಕೊಠಡಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಕಾಮಗಾರಿ ಆರಂಭವಾಗಿದೆ. ಶಾಲಾ ಎಸ್ಡಿಎಂಸಿ ಅಧ್ಯ ರಂಗಪ್ಪ ಹಡಪದ, ಉಪಾಧ್ಯ ನೀಲಾಬಾಯಿ ರಾಠೋಡ, ಸದಸ್ಯರು, ಗ್ರಾ.ಪಂ. ಸದಸ್ಯ ಪಿಂಟು ರಾಠೋಡ, ಅನೇಕರು ಟೊಂಕಕಟ್ಟಿ ನಿಂತಿದ್ದಾರೆ.
* ಎಲ್ಲರಿಂದ ಶ್ರಮದಾನ
ಶಾಲೆಯ ಅಧ್ಯರು, ಉಪಾಧ್ಯರು, ಸದಸ್ಯರು, ಗೆಳೆಯರು ತಾವೇ ಸ್ವತ@ ಶಾಲಾ ಕೊಠಡಿಗಳ ನಿರ್ಮಾಣದಲ್ಲಿ ಕೈಜೊಡಿಸಿದ್ದು, ಕೊಠಡಿ ನಿರ್ಮಾಣಕ್ಕೆ ಬೇಕಾಗುವ ಮರಳು, ಇಟ್ಟಿಗೆ ಸಿಮೆಂಟ್ ಕೆಲಸವನ್ನೂ ತಾವೇ ಸ್ವತ@ ಮಾಡುತ್ತಿದ್ದಾರೆ. ಅಲ್ಲದೇ ತಮ್ಮ ಮನೆಯ ಸದಸ್ಯರನ್ನು ಸಹ ಈ ಶಾಲಾ ಕೊಠಡಿಗಳ ನಿರ್ಮಾಣದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಇವರ್ಯಾರು ಕೂಲಿ ಪಡೆಯದೆ ನಮ್ಮ ಶಾಲೆ, ನಮ್ಮೂರ ಶಾಲೆ ಎಂಬ ಭಾವನೆಯಿಂದ ಶ್ರಮದಾನ ಮಾಡುತ್ತಿದ್ದಾರೆ. ದೇವಾಲಯ, ಕಚೇರಿ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಈ ಕಾಲದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕೈ ಹಾಕಿರುವುದು ಶಿಕ್ಷಣ ಪ್ರೇಮಕ್ಕೆ ಸಾಕ್ಷಿ.
* ಕೋಟ್
ಎಸ್ಡಿಎಂಸಿ ಸದಸ್ಯರು, ಗ್ರಾಮದ ಗೆಳೆಯರು, ಕೆಲ ಸರ್ಕಾರಿ ನೌಕರರ ಸಹಕಾರದಿಂದ ಎರಡು ಕೊಠಡಿ ನಿರ್ಮಾಣಕ್ಕೆ ಮುಂದಾಗಿದ್ದು, ಕಾಲಂ ಹಾಕಿ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಸದ್ಯದ ಮಟ್ಟಿಗೆ ಎರಡು ಕೊಠಡಿಗಳಿಗೆ ಮೇಲ್ಛಾವಣಿಗೆ ತಗಡಿನ ಶೀಟ್ ಅಳವಡಿಸಿ, ಕೊಠಡಿ ಆರಂಭಿಸುವ ಉದ್ದೇಶವಿದ್ದು, ಮುಂದಿನ ದಿನಗಳಲ್ಲಿ ಆ ತಗಡಿನ ಶೀಟ್ ತೆಗೆದು ಆರ್ಆರ್ಸಿ ಮೇಲ್ಛಾವಣಿ ಹಾಕಲಾಗುತ್ತದೆ.
> ಪಿಂಟು ರಾಠೋಡ ಗ್ರಾಪಂ ಸದಸ್ಯ
* ಕೋಟ್
ಸಿಎಸ್ಆರ್ ಯೋಜನೆ ಅಡಿಯಲ್ಲಿ ಪ್ರೌಢಶಾಲೆ ಮಂಜೂರಾಗಿದ್ದು, ಕೊಠಡಿ ಸಮಸ್ಯೆ ಇರುವ ಕಾರಣಕ್ಕೆ ಎಸ್ಡಿಎಂಸಿ, ಗ್ರಾಮಸ್ಥರು, ಶಾಲೆಯ ಹಳೇ ವಿದ್ಯಾರ್ಥಿಗಳು ವಸ್ತು ರೂಪದಲ್ಲಿ ದೇಣಿಗೆ ನೀಡಿ, ಕೊಠಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ದಸರಾ ರಜೆ ಮುಗಿದ ನಂತರ 9ನೇ ತರಗತಿ ಆರಂಭಿಸಲಾಗುವುದು.
> ರವಿಚಂದ್ರ ಬೇನಾಳ ಪ್ರಭಾರಿ ಮುಖ್ಯ ಗುರುಗಳು ಸರ್ಕಾರಿ ಪ್ರಾಥಮಿಕ ಶಾಲೆ, ಹುಲ್ಲಿಕೇರಿ ಎಸ್.ಪಿ.
ಗುಳೇದಗುಡ್ಡ ಸಮೀಪದ ಹುಲ್ಲಿಕೇರಿ ಎಸ್.ಪಿ. ಗ್ರಾಮದ ಗೆಳೆಯರು ಹಾಗೂ ಎಸ್ಡಿಎಂಸಿ ಸದಸ್ಯರು ದೇಣಿಗೆ ಸಂಗ್ರಹಿಸಿ ಎರಡು ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿರುವುದು.