ಪಾಂಡವಪುರ: ಜನ ಆರೋಗ್ಯ, ಶಿಕ್ಷಣ ಮತ್ತು ಅದ್ದೂರಿತನ ಮದುವೆಗಳಿಂದಾಗಿ ಸಾಲಗಾರರಾಗುತ್ತಿದ್ದಾರೆ. ಇದನ್ನು ಹೊರತುಪಡಿಸಿದರೆ ಸಾಲ ಮಾಡುವ ಪ್ರಮೇಯವೇ ಬರುವುದಿಲ್ಲ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಬನ್ನಂಗಾಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶುಕ್ರವಾರ ಅಯೋಜಿಸಿದ್ದ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೌಷ್ಟಿಕಾಂಶ ಆಹಾರದ ಕೊರತೆಯಿಂದ ಆರೋಗ್ಯ ಹದಗೆಟ್ಟರೆ ಆಸ್ಪತ್ರೆಗಳಿಗೆ ಲಕ್ಷಾಂತರ ಹಣ ಪಾವತಿಸಿ ಚಿಕಿತ್ಸೆ ಪಡೆಯಬೇಕಿದೆ. ಹೀಗಾಗಿ, ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವನೆಗೆ ಹೆಚ್ಚಿನ ಗಮನಹರಿಸಬೇಕು. ನಾವು ಮಕ್ಕಳಾಗಿದ್ದಾಗ ಆಟೋಟಗಳಲ್ಲಿ ಭಾಗಿಯಾಗುತ್ತಿದ್ದೆವು. ಮನೆಯಲ್ಲಿ ಇರುವುದಕ್ಕಿಂದ ಬಯಲಿನಲ್ಲಿಯೇ ಕಾಲ ಕಳೆಯುತ್ತಿದ್ದೆವು. ಆದರೆ ಈಗಿನ ಮಕ್ಕಳಿಗೆ ಮೊಬೈಲ್ ಬಿಟ್ಟರೆ ಬೇರೆ ಪ್ರಪಂಚ ತಿಳಿದಿಲ್ಲ. ಪಾಲಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಿ ಗಿಲ್ಲಿದಾಂಡು, ಬುಗುರಿ, ಗೋಲಿ, ಲಗೊರಿಗಳಂತಹ ಆಟಗಳಲ್ಲಿ ಪಾಲ್ಗೊಳ್ಳಲು ಪ್ರೇರೆಪಿಸಬೇಕು. ಜತೆಗೆ ಉತ್ತಮ ಆರೋಗ್ಯಕ್ಕಾಗಿ ಯೋಗ, ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.
ಬಾಲ್ಯ ವಿವಾಹ, ಭ್ರೂಣಹತ್ಯೆಯಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿವೆ. ಇದನ್ನು ತಡೆಗಟ್ಟಲು ಜನ ಸಹಕಾರ ನೀಡಬೇಕು. ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸಬಾರದು. ಪ್ರತಿಯೊಬ್ಬರೂ ಇದಕ್ಕೆ ಜವಾಬ್ದಾರರಾಗುತ್ತಾರೆ. ಕೇವಲ ಅಧಿಕಾರಿಗಳ ಮೇಲೆ ಜವಾಬ್ದಾರಿ ಹಾಕಿ ಕುಳಿತುಕೊಂಡರೆ ಇಂತಹ ಅಮಾನವೀಯ ಪ್ರಕರಣಗಳನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೂರ್ಣಿಮಾ ಮಾತನಾಡಿ, ಪೌಷ್ಟಿಕಾಂಶದ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡಲು ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ತಾಲೂಕಿನಾದ್ಯಾಂತ ಹಮ್ಮಿಕೊಳ್ಳಲಾಗುತ್ತಿದೆ. ರಕ್ತದೊತ್ತಡ, ಡಯಾಬಿಟಿಷ್ ಕಾಯಿಲೆಗಳು ಸಾಮಾನ್ಯವಾಗಿವೆ. ಹಿಂದೆ ಈ ಕಾಯಿಲೆಗಳನ್ನು ಶ್ರೀಮಂತರ ಕಾಯಿಲೆ ಎಂದು ಕರೆಯಲಾಗುತ್ತಿತ್ತು. ಉತ್ತಮ ಆಹಾರ ಸೇವನೆ ಮಾಡಿದರೆ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವೂ ವೃದ್ಧಿಯಾಗುತ್ತದೆ. ಸೊಪ್ಪು, ತರಕಾರಿ ಜತೆಗೆ ಹಿತ, ಮಿತವಾದ ಆಹಾರ ಸೇವನೆ ಉತ್ತಮ ಆರೋಗ್ಯದ ಗುಟ್ಟಾಗಿದೆ. ಅತಿಯಾದ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ತಾಯಂದಿರು ತಮ್ಮ ಮಕ್ಕಳಿಗೆ ಸ್ತನ್ಯಪಾನ ಮಾಡಿಸಬೇಕು. ಇತ್ತೀಚೆಗೆ ಕೇವಲ ಐದಾರು ತಿಂಗಳು ಸ್ತನ್ಯಪಾನ ಮಾಡಿಸಿ ಸುಮ್ಮನಾಗುತ್ತಿದ್ದಾರೆ. ಕನಿಷ್ಠ ಎರಡು ವರ್ಷದವರೆಗೆ ಸ್ತನ್ಯಪಾನ ಮಾಡಿಸಿದರೆ ದೀರ್ಘಾಯುಷಿಯಾಗಿ ಬದುಕಬಹುದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಮಾಡಿ, ಮಕ್ಕಳಿಗೆ ಅನ್ನ ಪ್ರಾಸನ ಮಾಡಿಸಲಾಯಿತು. ಇದೇ ವೇಳೆ ಪೌಷ್ಟಿಕಾಂಶದ ಆಹಾರಗಳನ್ನು ಪ್ರದರ್ಶಿಸಲಾಯಿತು. ಗ್ರಾಪಂ ಅಧ್ಯಕ್ಷ ಪ್ರಕಾಶ್, ಸದಸ್ಯರಾದ ತಮ್ಮೇಗೌಡ, ಬಲರಾಮಶೆಟ್ಟಿ, ಯೋಗೇಶ್, ರವಿ, ನಂಜುಂಡೇಗೌಡ, ಪಿಡಿಒ ಲಕ್ಷ್ಮೇಗೌಡ ಇತರರು ಇದ್ದರು.