ಪ್ರಶಾಂತ ರಿಪ್ಪನ್ಪೇಟೆ, ಬೆಂಗಳೂರು: ರಾಜ್ಯಾದ್ಯಂತ ಉಷ್ಣಹವೆ (ಹೀಟ್ ವೇವ್) ಮುಂದುವರೆದಿದ್ದು ಬೆಂಗಳೂರಿನಲ್ಲೂ ಉಷ್ಣಾಂಶ ಏರುಗತಿಯಲ್ಲಿ ಸಾಗಿದೆ. ಬಿಸಿಲಿನಿಂದ ತತ್ತರಿಸಿರುವ ಜನ ಹಣ್ಣು, ಜ್ಯೂಸ್, ತಂಪು ಪಾನೀಯಗಳಿಗೆ ಮೊರೆಹೋಗುತ್ತಿದ್ದಾರಾದರೂ ಅವು ತಾತ್ಕಾಲಿಕ ಧಣಿವು ನಿವಾರಿಸಿಕೊಳ್ಳುವ ಮಾರ್ಗಗಳಾಗಿದ್ದು, ದೀರ್ಘಕಾಲ ತಂಪು ಅನುಭವ ಪಡೆಯುವುದಕ್ಕಾಗಿ ವಾಟರ್ ಗೇಮ್ ಪಾರ್ಕ್‌ಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ.
ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಮನೆ ಅಥವಾ ಕಚೇರಿಯಿಂದ ಹೊರಬರುವುದು ಅಸಾಧ್ಯ ಎಂಬಷ್ಟರ ಮಟ್ಟಿಗೆ ಬಿಸಿಲ ಜಳ ಕಾಡುತ್ತಿದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರದ್ದು ತೀರಾ ಸಂಕಷ್ಟದ ದಿನಗಳಾಗಿವೆ. ಜೊತೆಗೆ ಬಹುತೇಕ ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಬಂದಿದ್ದು, ಮನೆಯಲ್ಲಿರುವ ಮಕ್ಕಳನ್ನು ಸುಧಾರಿಸುವುದು ಪೋಷಕರಿಗೆ ದೊಡ್ಡ ತಲೆನೋವಾಗಿದೆ. ಈ ಎಲ್ಲ ಕಾರಣಗಳಿಂದ ವಯಸ್ಸಿನ ಭೇದವಿಲ್ಲದೆ ಫ್ಯಾಮಿಲಿ ಸಮೇತ ರೆಸಾರ್ಟ್‌ಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಬೆಂಗಳೂರಿನ ಸುತ್ತಮುತ್ತ ಇರುವ ರೆಸಾರ್ಟ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ.
ರೆಸಾರ್ಟ್‌ಗಳಲ್ಲಿ ವಸತಿ ಸಹಿತ ಅಥವಾ ಡೇ ಔಟಿಂಗ್ ವಿತ್ ಫುಡ್ ಕಾನ್ಸೆಪ್ಟ್‌ಗಳಿದ್ದು, ಡೇ ಔಟಿಂಗ್ ಬಗ್ಗೆ ಹೆಚ್ಚು ಜನರು ಒಲವು ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ರೆಸಾರ್ಟ್‌ಗಳಲ್ಲಿದ್ದು ಊಟ, ತಿಂಡಿ ಜೊತೆಗೆ ವಿವಿಧ ಗೇಮ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲೂ ವಾಟರ್ ಗೇಮ್‌ಗಳು ಅತಿಹೆಚ್ಚು ಜನರನ್ನು ಆಕರ್ಷಿಸುತ್ತಿವೆ.
ಸಾಮಾನ್ಯವಾಗಿ ಹಿರಿಯರಿಗೆ ಬೇರೆ, ಮಕ್ಕಳಿಗೆ ಬೇರೆ ದರ ನಿಗದಿ ಮಾಡುವ ರೆಸಾರ್ಟ್‌ಗಳು ವಿಶೇಷ ದಿನಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಆಫರ್‌ಗಳನ್ನು ನೀಡುತ್ತವೆ. ಅದರಂತೆ ಬೇಸಿಗೆಯ ತೀವ್ರತೆ ಹೆಚ್ಚಾಗಿರುವುದು ಹಾಗೂ ರಜೆಯಲ್ಲಿರುವ ಮಕ್ಕಳನ್ನು ಆಕರ್ಷಿಸಲು ಕೆಲ ರೆಸಾರ್ಟ್‌ಗಳು ಡಿಸ್ಕೌಂಟ್ ಮೂಲಕ ವಿವಿಧ ಆಫರ್‌ಗಳನ್ನು ಘೋಷಿಸಿವೆ.
ರೆಸಾರ್ಟ್‌ಗಳಲ್ಲಿ ಔಟ್‌ಡೋರ್ ಮತ್ತು ಇನ್‌ಡೋರ್ ಗೇಮ್‌ಗಳು ಪ್ರತ್ಯೇಕವಾಗಿದ್ದು, ಕೆಲವು ಕಾಂಪ್ಲಿಮೆಂಟರಿ ಇದ್ದರೆ; ಇನ್ನು ಕೆಲವು ಪ್ರತ್ಯೇಕ ಹಣ ಪಾವತಿಸಬೇಕಾಗಿರುತ್ತದೆ. ಆದರೆ ಜಲಕ್ರೀಡೆಗಳು ಮಾತ್ರ ಎಲ್ಲವೂ ಉಚಿತವಾಗಿರುತ್ತವೆ. ಬೇಸಿಗೆಯ ಬೇಗೆಯನ್ನು ನಿವಾರಿಸಿಕೊಳ್ಳುವುದಕ್ಕಾಗಿಯೇ ರೆಸಾರ್ಟಿಗೆ ಹೋಗುವ ಬಹುತೇಕರು ಹೆಚ್ಚಿನ ಸಮಯವನ್ನು ವಾಟರ್ ಗೇಮ್‌ನಲ್ಲೇ ಕಳೆಯುತ್ತಾರೆ
ಜಲಕ್ರೀಡೆಗಳಲ್ಲಿ ವಿಶೇಷವಾಗಿ ಸ್ಲೈಡಿಂಗ್, ವೇವ್ ಪೂಲ್, ಸ್ವಿಮ್ಮಿಂಗ್ ಪೂಲ್, ಲೇಸಿ ರಿವರ್, ಆ್ಯಕ್ಟಿವಿಟಿ ಪೂಲ್, ಕಿಡ್ಸ್ ಪೂಲ್, ಕಿಡ್ಸ್ ಸ್ಲೈಡ್, ರೈನ್ ಡ್ಯಾನ್ಸ್ ಹೀಗೆ ಬಹುತೇಕ ನೀರಿನಲ್ಲೇ ಕಾಲ ಕಳೆಯುವ ವಾಟರ್ ಗೇಮ್‌ಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ.
ಬೆಂಗಳೂರಿನಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ರೆಸಾರ್ಟ್‌ಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಜನರ ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ಸೇವೆ ಮತ್ತು ಭದ್ರತೆಗೆ ಹೆಚ್ಚಿನ ಗಮನ ನೀಡುತ್ತಿದ್ದೇವೆ ಎಂದು ಖಾಸಗಿ ರೆಸಾರ್ಟ್ ಒಂದರ ಸಿಬ್ಬಂದಿ ಹೇಳಿದ್ದಾರೆ.
ಕಾರು ಮತ್ತಿತರ ವಾಹನ ತೊಳೆಯುವುದಕ್ಕೆ, ಸ್ವಿಮ್ಮಿಂಗ್ ಪೂಲ್‌ಗಳಿಗೆ ಕಾವೇರಿ ನೀರು ಬಳಸದಂತೆ ಜಲಮಂಡಳಿ ಸೂಚನೆ ನೀಡಿದೆ. ಬಹುತೇಕ ರೆಸಾರ್ಟ್‌ಗಳು ಬೆಂಗಳೂರಿನ ಹೊರ ವಲಯದಲ್ಲಿರುವುದರಿಂದ ಜಲಕ್ರೀಡೆಗಳಿಗೆ ಬೇಕಾದ ನೀರನ್ನು ತಮ್ಮದೇ ಬೋರ್‌ವೆಲ್‌ಗಳಿಂದ ಬಳಸುತ್ತಿದ್ದು, ಜಲಮಂಡಳಿಯ ನಿಯಮವನ್ನು ಪಾಲಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
-ಭಾರತಿ ಪ್ರಕಾಶ್, ರೆಸಾರ್ಟಿಗೆ ಭೇಟಿ ನೀಡಿದವರು