ಜಿಲ್ಲೆ

ರಸ್ತೆಯಲ್ಲಿ ಕಸ ಎಸೆಯುವ ಅನಾಗರಿಕರು...

ಪ್ರಶಾಂತ ಜಿ. ಭಾಗ್ವತ

ಮೂಡಸಗ್ರಿ ವಾರ್ಡ್​ಗೆ ತಪ್ಪದ ಕಾಟ

ಪೆರಂಪಳ್ಳಿ ಮಾರ್ಗದಲ್ಲಿ ತ್ಯಾಜ್ಯದ ರಾಶಿ

ಪ್ರಶಾಂತ ಭಾಗ್ವತ, ಉಡುಪಿ

ನಗರಸಭೆಯ ವ್ಯಾಪ್ತಿಗೊಳಪಡುವ ಮೂಡಸಗ್ರಿ ಗ್ರಾಮದಲ್ಲಿ ಪೆರಂಪಳ್ಳಿಗೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆ ಇರುವುದೇ ಇದೀಗ ಶಾಪವಾಗಿ ಪರಿಣಮಿಸಿದೆ. ಈ ಮಾರ್ಗದಲ್ಲಿ ಸಂಚರಿಸುವ ಕೆಲವರು ತಮ್ಮ ಮನೆಯ ಕಸ, ತ್ಯಾಜ್ಯ ಎಸೆಯುತ್ತಿದ್ದು, ಇಲ್ಲಿನ ಸುಂದರ ಪರಿಸರ ಹದಗೆಟ್ಟಿದೆ.

ಉಡುಪಿಯ ಲಕ್ಷ್ಮೀಂದ್ರನಗರದಿಂದ ಸಗ್ರಿ ಮೂಲಕ ಪೆರಂಪಳ್ಳಿ ಕೂಡು ರಸ್ತೆಯಲ್ಲಿ ಜನರು ಎಸೆದಿರುವ ಕಸದ ರಾಶಿ.

ತಾವು ಮಾಡುತ್ತಿರುವ ಕಾರ್ಯ ತಪ್ಪೆಂದು ತಿಳಿದಿದ್ದರೂ, ಸುಶಿತರಾಗಿದ್ದರೂ ಸಹ ಅನೇಕರು ರಾತ್ರಿ ವೇಳೆಯಲ್ಲಿ ಕದ್ದುಮುಚ್ಚಿ ಈ ಮಾರ್ಗದ ಹಲವೆಡೆ ಕಸ ಎಸೆಯುತ್ತಿದ್ದಾರೆ. ಉದ್ಯೋಗದ ನಿಮಿತ್ತ ಬೆಳಗ್ಗೆ ಈ ರಸ್ತೆಯಲ್ಲಿ ಕಾರು, ಬೈಕ್​ಗಳ ಮೂಲಕ ತೆರಳುವ ಅನ್ಯ ಊರಿನವರೂ ಸಹ ತ್ಯಾಜ್ಯ ಚೆಲ್ಲಿ ಸಾಗುತ್ತಾರೆ.

ಊರಿನವರಿಂದ ಕಾವಲು

ತಮ್ಮೂರಿನ ರಸ್ತೆಯಲ್ಲಿ ಕಸ ಎಸೆಯುವುದನ್ನು ತಡೆಯಲು ಊರಿನ ಅನೇಕ ಹಿರಿಯರು ಪಾಳಿಯಂತೆ ರಾತ್ರಿ ವೇಳೆ ಈ ಹಿಂದೆ ಗಸ್ತು ತಿರುಗುತ್ತಿದ್ದರು. ನಸುಕಿನಲ್ಲಿ ವಾಕಿಂಗ್​ಗೆ ಬಂದಾಗಲೂ ಸಹ ಕಸ ಎಸೆಯುವ ಜಾಗದಲ್ಲಿ ನಿಂತು ಕಾವಲು ಮಾಡುತ್ತಿದ್ದರು. ಇದರಿಂದ ಊರಿನ ರಸ್ತೆಯಲ್ಲಿ ಅಷ್ಟೊಂದು ಕಸ ಕಂಡು ಬರುತ್ತಿರಲಿಲ್ಲ. ಇದೀಗ ಮತ್ತೆ ಕೆಲ ಅನಾಗರಿಕರು ಕಸ ಎಸೆಯತೊಡಗಿದ್ದಾರೆ.

ಸಮರ್ಪಕವಾಗಿಲ್ಲ ಕಸ ವಿಲೇವಾರಿ

ನಗರಸಭೆಯವರು ನಿತ್ಯ ಕಸ ವಿಲೇವಾರಿ ಮಾಡುತ್ತಿದ್ದರೂ ಸಹ ಅನೇಕ ವಾರ್ಡ್​ಗಳಿಗೆ ಕಸದ ವಾಹನ ಬರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೆಲವು ವಾರ್ಡ್​ಗಳಿಗೆ ವಾರದಲ್ಲಿ ಮೂರುದಿನ, ಎರಡುದಿನ ಮಾತ್ರ ಕಸ ಸಂಗ್ರಹಣೆಗೆ ವಾಹನ ಬರುತ್ತಿದ್ದು, ಜನರು ಮನೆಯಲ್ಲಿನ ಕಸವನ್ನು ರಸ್ತೆಗೆ ಚೆಲ್ಲುತ್ತಿದ್ದಾರೆ. ಸಗ್ರಿ-ಪೆರಂಪಳ್ಳಿ ಕೂಡು ರಸ್ತೆಯಲ್ಲಿ ಕಸದ ರಾಶಿಯೇ ಇದ್ದರೂ ಸಹ ವಿಲೇವಾರಿ ಮಾಡುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚರಂಡಿಯುದ್ದಕ್ಕೂ ಪ್ಲಾಸ್ಟಿಕ್​ ತ್ಯಾಜ್ಯ

ಇಂದ್ರಾಳಿಯಿಂದ ಸಗ್ರಿ ಶಾಲೆ ಸಂಪರ್ಕಿಸುವ ಇನ್ನೊಂದು ರಸ್ತೆಯ ಎಡ-ಬಲದ ಚರಂಡಿಗಳಲ್ಲೂ ಪ್ಲಾಸ್ಟಿಕ್​ ತ್ಯಾಜ್ಯ ತುಂಬಿಕೊಂಡಿದೆ. ಈ ಮಾರ್ಗದಲ್ಲಿ ಸುಮಾರು ಮುಕ್ಕಾಲು ಕಿ.ಮೀ.ಯಷ್ಟು ರಸ್ತೆಯ ಅಕ್ಕ-ಪಕ್ಕದಲ್ಲಿ ಯಾವುದೇ ಮನೆಗಳಿಲ್ಲ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ತಮ್ಮ ಮನೆಯ ಕಸವನ್ನು ಇಲ್ಲಿ ಎಸೆಯುತ್ತಾರೆ. ಸಮೀಪದ ಕೆಲ ಹೋಟೆಲ್​ನವರು ಹಾಗೂ ರಾತ್ರಿ ವೇಳೆ ಎಣ್ಣೆ ಪಾರ್ಟಿ ಮಾಡಿದವರೂ ಸಹ ಇಲ್ಲಿ ಪ್ಲಾಸ್ಟಿಕ್​ ತ್ಯಾಜ್ಯ, ಖಾಲಿ ಸಾರಾಯಿ ಬಾಟಲಿ ಎಸೆಯತ್ತಿದ್ದಾರೆ. ಖಾಸಗಿ ಸಭೆ, ಸಮಾರಂಭಗಳಲ್ಲಿ ಬಳಸಿದ ಊಟ-ತಿಂಡಿಯ ಪೇಪರ್ ಪ್ಲೇಟ್ಸ್ ಹಾಗೂ ಪೇಪರ್ ಕಪ್ ಗಳನ್ನೂ ಚರಂಡಿಗೆ ಎಸೆಯುತ್ತಿದ್ದಾರೆ. ನಾಯಿ, ದನಗಳು ಆ ಕಸವನ್ನು ಮೇಲಕ್ಕೆ ತಂದು ಅದರಲ್ಲಿರುವ ಆಹಾರ ಪದಾರ್ಥ ತಿನ್ನುವುದರಿಂದ ರಸ್ತೆಯ ಮೇಲೂ ಪ್ಲಾಸ್ಟಿಕ್​ ತ್ಯಾಜ್ಯ ಹರಡಿಕೊಳ್ಳುತ್ತಿದ್ದು, ಇಲ್ಲಿನ ಪರಿಸರ ಹದಗೆಟ್ಟಿದೆ.
ಸಗ್ರಿ-ಪೆರಂಪಳ್ಳಿ ಕೂಡುರಸ್ತೆಯ ಮಾರ್ಗವೆಂದರೆ ಕಸ ಎಸೆಯುವ ತಾಣವಾಗಿ ಮಾರ್ಪಟ್ಟಿದೆ. ಸಗ್ರಿ ಪ್ರಾಥಮಿಕ ಶಾಲೆಯ ನಂತರದ ರಸ್ತೆ ಕಸದ ಕೊಂಪೆಯಾಗಿದೆ. ಕಸವನ್ನು ಸಾಲಾಗಿ ಪ್ರದರ್ಶನಕ್ಕೆ ಇಟ್ಟಂತೆ ತೋರುತ್ತದೆ. ಜನರ ಮನಸ್ಥಿತಿ ಎಷ್ಟು ಕೆಟ್ಟಿದೆ ಎನ್ನುವುದಕ್ಕೆ ಈ ರೀತಿ ರಸ್ತೆಯಲ್ಲಿ ಕಸ ಎಸೆಯುತ್ತಿರುವುದೇ ನಿದರ್ಶನವಾಗಿದೆ. ನಗರಸಭೆ ಅಧಿಕಾರಿಗಳು ಕಸ ಎಸೆಯುವವರಿಗೆ ದಂಡ ಹಾಕಿದರೆ ಸಾಲದು, ಅವರಿಗೆ ಜೈಲುಶಿಕ್ಷೆಯಾಗುವಂತಹ ಕಾನೂನು ಅಳವಡಿಸಬೇಕು. | ಉಮೇಶ್​ ನಾಯಕ್​. ಮಾಜಿ ಅಧ್ಯಕ್ಷ, ನಮ್ಮೂರ ಗೆಳೆಯರ ಬಳಗ, ಸಗ್ರಿ ಸ್ವಚ್ಛತೆಯಲ್ಲಿ ಉಡುಪಿ ದೇಶದಲ್ಲಿಯೇ ಗಮನ ಸೆಳೆದ ನಗರವಾಗಿತ್ತು. ಆದರೆ, ಇಲ್ಲಿನ ಸುಶಿತ ನಾಗರಿಕರೇ ಮನೆಯ ಕಸವನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ಎಸೆಯುವ ಮೂಲಕ ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ನಗರಸಭೆಯವರು ಈ ಮಾರ್ಗದಲ್ಲಿ ಕಸ ಎಸೆಯದಂತೆ ಲಕ ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಜನರೂ ಸಹ ನಗರಸಭೆಯ ವಾಹನಕ್ಕೇ ಕಸ ನೀಡುವ ಮೂಲಕ ಪರಿಸರದ ಸ್ವಚ್ಛತೆ ಕಾಪಾಡಬೇಕು. | ಹೇಮನಾಥ್​ ಹೆಗ್ಡೆ. ಬೂತ್​ ಅಧ್ಯಕ್ಷ, ಸಗ್ರಿ 19ನೇ ವಾರ್ಡ್​ ಎಷ್ಟೇ ಕ್ರಮ ಕೈಗೊಂಡರೂ ರಾತ್ರಿ ವೇಳೆ ಹಾಗೂ ನಸುಕಿನಲ್ಲಿ ಕೆಲವರು ಕಸ ಎಸೆದು ಹೋಗುತ್ತಾರೆ. ಹೀಗಾಗಿ ಸಗ್ರಿ ಶಾಲೆಯ ಮಾರ್ಗದಲ್ಲಿ ಕೆಲದಿನಗಳ ಮಟ್ಟಿಗೆ ಕ್ಯಾಮರಾ ಅಳವಡಿಸುವಂತೆ ಹಾಗೂ ಕಸ ಎಸೆಯದಂತೆ ಎಚ್ಚರಿಕೆ ಮೂಡಿಸಲು ಶಾಶ್ವತವಾದ ಲಕ ಅಳವಡಿಸುವಂತೆಯೂ ನಗರಸಭೆಗೆ ವಿನಂತಿಸಿದ್ದೇನೆ. | ಭಾರತಿ ಪ್ರಶಾಂತ್​. ನಗರಸಭೆ ಸದಸ್ಯೆ, ಸಗ್ರಿ ವಾರ್ಡ್​