ರಾಯಚೂರು: ಕಳೆದ ಎರಡ್ಮೂರು ದಶಕಗಳಿಂದ ಭ್ರಷ್ಟಾಚಾರ, ದುರಾಡಳಿತ ನಡೆಸುತ್ತಿರುವ ಜೆಸಿಬಿ ಪಕ್ಷಗಳನ್ನು ತಿರಸ್ಕರಿಸಿ ಪ್ರಾಮಾಣಿಕ ಪ್ರಾದೇಶಿಕ ಪಕ್ಷ ವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಬೇಕು ಎಂದು ಕೆಆರ್‌ಎಸ್ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಮನವಿ ಮಾಡಿದರು.
ಪಕ್ಷದಿಂದ ಹಮ್ಮಿಕೊಂಡಿರುವ ಕರ್ನಾಟಕಕ್ಕಾಗಿ ನಾವು ಬೈಕ್ ರ‌್ಯಾಲಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಂಗಳವಾರ ಮಾತನಾಡಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರಾಜ್ಯದಲ್ಲಿ ಆಡಳಿತ ನಡೆಸಿದ್ದು, ಭ್ರಷ್ಟಾಚಾರ ಮತ್ತು ದುರಾಳಿತ ನಡೆಸಿವೆ ಎಂದರು.
ರಾಜ್ಯಸಭೆ ಚುನಾವಣೆಯಲ್ಲಿ ಎಲ್ಲ ಶಾಸಕರನ್ನು ಗುಲಾಮರಂತೆ ರೆಸಾರ್ಟ್‌ನಲ್ಲಿ ಕೂಡಿ ಹಾಕಲಾಗಿತ್ತು. ಮೂರು ಪಕ್ಷಗಳ ಹೈಕಮಾಂಡ್ ಹೇಳಿದಂತೆ ರಾಜ್ಯದ ನಾಯಕರು ತಲೆ ಅಲ್ಲಾಡಿಸಿ ಅವರ ಮಾತು ಕೇಳುತ್ತಿದ್ದಾರೆ. ಗುಲಾಮರ ಸಂತತಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ.
ರಾಜ್ಯದ ಹಿತ ಕಾಪಾಡುವ ಯೋಗ್ಯತೆ ಮೂರು ಪಕ್ಷಗಳಿಗಿಲ್ಲ. ಶಾಸಕರಾದವರು ಆಯಾ ಕ್ಷೇತ್ರದ ಅಭಿವೃದ್ಧಿ ಮಾಡಬೇಕು. ಕೋಳಿ, ಕುರಿಯಂತೆ ಮಾರಾಟವಾಗುತ್ತಿರುವ ಶಾಸಕರನ್ನು ಮನೆಗೆ ಕಳುಹಿಸಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಜನರು ಆಯ್ಕೆ ಮಾಡಬೇಕು.
ೆ.19ರಂದು ದೇವನಹಳ್ಳಿಯಿಂದ ಆರಂಭವಾದ ರ‌್ಯಾಲಿ ರಾಜ್ಯಾದ್ಯಂತ 13 ದಿನಗಳ ಕಾಲ 3 ಸಾವಿರ ಕಿಲೋ ಮೀಟರ್ ಸಂಚರಿಸಲಿದೆ. 22 ಜಿಲ್ಲೆಯಲ್ಲಿ ರ‌್ಯಾಲಿ ನಡೆಸಿದ್ದು, ಇನ್ನೂ 11 ಜಿಲ್ಲೆಗಳಲ್ಲಿ ರ‌್ಯಾಲಿ ನಡೆಯಲಿದೆ ಎಂದು ರವಿಕೃಷ್ಣಾರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ ಗೋಮರ್ಸಿ, ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ, ಪದಾಕಾರಿಗಳಾದ ಸಿ.ಎನ್.ದೀಪಕ್, ನರಸಿಂಹಮೂರ್ತಿ, ರಘುಪತಿ ಭಟ್, ಎಲ್.ಜೀವನ್, ಚಂದ್ರಶೇಖರ ಮಠದ, ಬಿ.ಜಿ.ಕುಂಬಾರ್, ಜಿಲ್ಲಾಧ್ಯಕ್ಷ ರಾಘವೇಂದ್ರ ಕುಂದೂರು, ಕಾರ್ಯದರ್ಶಿ ವಿಜಯಕುಮಾರ ಪೋಳ ಉಪಸ್ಥಿತರಿದ್ದರು.