ಮೂಡಿಗೆರೆ: ಪೊಲೀಸರು ಎಂದರೆ ಭಯವಲ್ಲ. ಜನರಿಗೆ ರಕ್ಷಣೆ ಮತ್ತು ಧೈರ್ಯ ತುಂಬಲು
ಇರುವವರು. ಪೊಲೀಸರ ನೆರವು ಬೇಕಾದಲ್ಲಿ ಯಾರೊಬ್ಬರೂ ಭಯಪಡದೆ ತುರ್ತು ಸಂಖ್ಯೆಗೆ
ಕರೆ ಮಾಡಿದರೆ ಮರುಕ್ಷಣದಲ್ಲೇ ಭೇಟಿ ನೀಡಲಾಗುವುದು. ಪೊಲೀಸ್ ಠಾಣೆಗಳು
ಸಾರ್ವಜನಿಕರಿಗಾಗಿ ಸದಾ ಬಾಗಿಲು ತೆರೆದಿರುತ್ತದೆ ಯಾವ ಸಂದರ್ಭದಲ್ಲಿ ಕೂಡ ಠಾಣೆಗೆ
ಭೇಟಿ ನೀಡಬಹುದು ಎಂದು ಗೋಣಿಬೀಡು ಠಾಣೆ ಪಿಎಸ್‌ಐ ಹರ್ಷವರ್ಧನ್ ಹೇಳಿದರು.
ತಾಲೂಕಿನ ಜೇನುಬೈಲ್ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ಕಾನೂನು ಅರಿವು
ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಪೋಕ್ಸೋ ಕಾಯ್ದೆ
ಬಳಸಿಕೊಳ್ಳಲು ಅವಕಾಶವಿದೆ. ಇಂತಹ ಕಠಿಣ ಕಾಯ್ದೆಯಿಂದಾಗಿ ಹೆಣ್ಣು ಮಕ್ಕಳ ಮೇಲೆ
ದೌರ್ಜನ್ಯ ಕಡಿಮೆಯಾಗಿದೆ. ಕಾನೂನಿನ ಕುಣಿಕೆಗೆ ಬೀಳದಂತೆ ಎಚ್ಚರ ವಹಿಸಿಕೊಳ್ಳಬೇಕು.
ಕಾನೂನಿನ ಅರಿವು ಎಲ್ಲರಲ್ಲೂ ಉಂಟಾಗಬೇಕು. ಕಾನೂನಿನ ಬಗ್ಗೆ ಅರಿವಿಲ್ಲದಿದ್ದರೇ
ಸಮಾಜದಲ್ಲಿ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ
ಕಾನೂನಿನ ತಿಳಿವಳಿಕೆ ಮೂಡಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಪೊಲೀಸ್
ಇಲಾಖೆಯಿಂದ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.
ಮಹಿಳೆಯರು ಒಂಟಿಯಾಗಿ ಹೋಗುವಾಗ ಸರಗಳ್ಳತನ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ
ಮಹಿಳೆಯರು 112 ಸಂಖ್ಯೆಗೆ ಕರೆ ಮಾಡಿದರೆ ಪೊಲೀಸರು ಅದೆ ಸ್ಥಳಕ್ಕೆ ಹಾಜರಾಗುತ್ತಾರೆ.
ತುರ್ತು ಸಂದರ್ಭದಲ್ಲಿ ಮಹಿಳೆಯರು ಭಯಪಡದೆ ಪೊಲೀಸರನ್ನು ಸಂಪರ್ಕಿಸಬೇಕು.
ಮೊಬೈಲ್ ಫೋನ್ ಬಳಕೆ ವಿಧಾನದಿಂದಾಗಿ ಸೈಬರ್‌ಅಪರಾಧಗಳು ಹೆಚ್ಚುತ್ತಿವೆ. ಅಪರಿಚಿತ
ಕರೆಗಳು ಬಂದರೆ ಬ್ಯಾಂಕ್ ಖಾತೆ, ಮನೆ ವಿಳಾಸ ಸೇರಿದಂತೆ ವಯಕ್ತಿಕ ಮಾಹಿತಿಗಳನ್ನು
ನೀಡಬಾರದು. ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಹೆಲ್ಮೆಟ್ ಧರಿಸದೆ
ಬೈಕ್ ಸಂಚಾರ, ಸೀಟ್ಬೆಲ್ಟ್ ಧರಿಸದೆ ಕಾರು ಚಾಲನೆಯಿಂದ ಜೀವ ಹಾನಿಯಾಗುವ ಸಾಧ್ಯತೆ
ಇದೆ ಎಂದರು.
ಗ್ರಾಮದ ಮುಖಂಡರಾದ ನಾಗೇಶ್, ಕೆಂಚಯ್ಯ, ಸುರೇಶ್, ಪೊಲೀಸ್ ಸಿಬ್ಬಂದಿಗಳಾದ
ಸುನಿಲ್, ಅಶ್ವಿನಿ ಇತರರಿದ್ದರು.