ಜಿಲ್ಲೆ

ಉಚಿತವಾಗಿ ಕೊಟ್ರೂ ಬೇಡ ಎನ್ನುತ್ತಿದ್ದಾರೆ ಉತ್ತರ ಕನ್ನಡ ಜನ! ಯಾವುದದು..?

ಕಾರವಾರ: ಉಚಿತವಾಗಿ ಕೊಟ್ರೂ ಜನ ಬೇಡ ಎನ್ನುತ್ತಿದ್ದಾರೆ. ಇದರಿಂದ ಆರೋಗ್ಯ ಇಲಾಖೆಗೆ ಜಿಲ್ಲಾಡಳಿತಕ್ಕೆ ತಲೆಬಿಸಿಯಾಗಿದೆ.

ರಾಜ್ಯದಲ್ಲೂ, ಜಿಲ್ಲೆಯಲ್ಲೂ ಕೋವಿಡ್ ಪ್ರಮಾಣ ಏರುತ್ತಿದೆ. ಸದ್ಯ ಜಿಲ್ಲೆಯಲ್ಲಿ 42 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಶೇ. 2 ರಿಂದ 3 ರಷ್ಟು ಪಾಸಿಟಿವಿಟಿ ಪ್ರಮಾಣವಿದೆ. ಈ ಮೊದಲು ಸರ್ಕಾರ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಉಚಿತವಾಗಿ ಕೋವಿಡ್ ನಿರೋಧಕ 3 ನೇ ಬೂಸ್ಟರ್ ಡೋಸ್ ನೀಡಿತ್ತು. ಅದನ್ನೂ ಎಲ್ಲರೂ ಪಡೆದಿಲ್ಲ. ಈಗ 20 ದಿನಗಳಿಂದ 18 ವರ್ಷ ಮೇಲ್ಪಟ್ಟವರಿಗೂ ಉಚಿತವಾಗಿ ಲಸಿಕೆ ನೀಡುತ್ತಿದೆ. ಆದರೂ ಪಡೆಯಲು ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ಕೋವಿಡ್ ರೋಗ ನಿರೋಧಕ 2 ನೇ ಡೋಸ್ ಲಸಿಕೆ ಪಡೆದು 6 ತಿಂಗಳು ಕಳೆದ 18 ವರ್ಷ ಮೇಲ್ಪಟ್ಟ ಎಲ್ಲ ಫಲಾನುಭವಿಗಳು ಕಡ್ಡಾಯವಾಗಿ 3 ನೇ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸೂಚಿಸಿದ್ದಾರೆ.


ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್ ಸಾಂಕ್ರಾಮಿಕ ಖಾಯಿಲೆಯಿಂದ ರಕ್ಷಣೆ ಪಡೆಯಲು ಈಗಾಗಲೇ ದೇಶಾದ್ಯಂತ 12 ವರ್ಷ ಮೇಲ್ಪಟ್ಟ ಎಲ್ಲ ಫಲಾನುಭವಿಗಳಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲೂ ಹೆಚ್ಚಿನ ಫಲಾನುಭವಿಗಳು ಎರಡೂ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಕೋವಿಡ್ ಲಸಿಕೆಯನ್ನು ಪಡೆದವರಲ್ಲಿ ಕೋವಿಡ್ ಖಾಯಿಲೆಯ ತೀವ್ರತೆ ಅತೀ ಕಡಿಮೆ ಪ್ರಮಾಣದಲ್ಲಿ ಇರುವುದು ಈಗಾಗಲೇ ಸಾಬೀತಾಗಿದೆ. ಆದರೆ, ಕೋವಿಡ್ ಸೋಂಕು ಹರಡುವಿಕೆ ಮುಂದುವರಿದಿದೆ. 2ನೇ ಡೋಸ್ ಲಸಿಕೆ ಪಡೆದು 6 ತಿಂಗಳ ನಂತರ ಲಸಿಕೆಯಿಂದ ಸಿಗುವ ರಕ್ಷಣೆ ಕಡಿಮೆಯಾಗುವ ಸಾದ್ಯತೆ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾರ್ಗಸೂಚಿಯಂತೆ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆಯಲು ಸೂಚಿಸಲಾಗಿದೆ.

ಪ್ರಾಥಮಿಕ ಹಂತದಲ್ಲಿ 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಉಚಿತವಾಗಿ ಬೂಸ್ಟರ್ ಡೋಸ್ ನೀಡಲು ಪ್ರಾರಂಭ ಮಾಡಲಾಗಿದೆ. ಜಿಲ್ಲೆಯಲ್ಲಿ 2,00,369 ಫಲಾನುಭವಿಗಳ ಪೈಕಿ 88,799(ಶೇ.44) ಮಾತ್ರ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ. ಇನ್ನೂ 1,11,570 ಜನ ಲಸಿಕೆ ಪಡೆದುಕೊಳ್ಳಲು ಬಾಕಿ ಇದೆ. ಅಲ್ಲದೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 18 ವರ್ಷದಿಂದ 59 ವರ್ಷದವರೆಗಿನ ಎಲ್ಲ ನಾಗರಿಕರಿಗೆ ಜುಲೈ 15 ರಿಂದ ಸೆಪ್ಟೆಂಬರ್ 30ರ ವರೆಗೆ ಉಚಿತವಾಗಿ ಲಸಿಕೆ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ವಯೋಮಾನದ ಒಟ್ಟು 7,74,330 ಫಲಾನುಭವಿಗಳ ಪೈಕಿ ಇದುವರೆಗೆ 72,181 ಫಲಾನುಭವಿಗಳು(ಶೇ.9) ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ. ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆಗೇ ತೆರಳಿ ಲಸಿಕಾಕರಣ ನಡೆಸುತ್ತಿದ್ದಾರೆ ಎಲ್ಲ ನಾಗರಿಕರು ಇದನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಅವರು ಸೂಚಿಸಿದ್ದಾರೆ.