ಬೆಂಗಳೂರು: ರಾಜ್ಯದಲ್ಲಿ ಎಚ್1ಎನ್1 ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ಇದೀಗ ವೈದ್ಯರಿಗೇ ಸೋಂಕು ತಗುಲಿರುವುದು ಜನರನ್ನು ಮತ್ತಷ್ಟು ಆತಂಕಕ್ಕೀಡುಮಾಡಿದೆ. ರಾಜ್ಯದಲ್ಲಿ ಎರಡು ತಿಂಗಳಲ್ಲಿ 220 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು, ಮೂವರು ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದು, ನಗರದ ಬನಶಂಕರಿ 1ನೇ ಹಂತದ ಪ್ರಶಾಂತ್ ಆಸ್ಪತ್ರೆಯಲ್ಲಿ ಇತ್ತೀಚೆಗೆ 8ಕ್ಕೂ ಹೆಚ್ಚು ಎಚ್1ಎನ್1 ಪ್ರಕರಣಗಳು ವರದಿಯಾಗಿದೆ. ವಿಪರ್ಯಾಸವೆಂದರೆ ಅದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೂ ಸೋಂಕು ತಗುಲಿದೆ.
ಈ ಕುರಿತು ಆಸ್ಪತ್ರೆಯ ಮುಖ್ಯಸ್ಥ ಡಾ. ಮೋಹನ್ ಪ್ರತಿಕ್ರಿಯೆ ನೀಡಿ, ಆಸ್ಪತ್ರೆಯಲ್ಲಿ ಇತ್ತೀಚೆಗೆ ಎಚ್1ಎನ್1 ಸೋಂಕಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಪ್ರತಿ ವರ್ಷ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿಗೆ ಲಸಿಕೆ ಹಾಕಿಸಲಾಗುತ್ತದೆ. ಈ ವೈದ್ಯರು ಆಸ್ಪತ್ರೆಗೆ ಕನ್ಸಲ್ಟೆಂಟ್ ಆಗಿ ಸೇವೆ ನೀಡುತ್ತಿದ್ದರು. ಹೀಗಾಗಿ ಇವರು ಲಸಿಕೆ ಹಾಕಿಸಿಕೊಂಡಿರಲಿಲ್ಲ. ಇದೀಗ ಅವರಿಗೆ ಸೋಂಕು ತಗುಲಿದೆ ಎಂದು ತಿಳಿಸಿದರು. ಆಸ್ಪತ್ರೆಯಲ್ಲಿ ಈವರೆಗೆ
ಎಚ್1ಎನ್1ಗೆ ಚಿಕಿತ್ಸೆ ಪಡೆದವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸೋಂಕಿತ ವೈದ್ಯರಿಗೂ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿ ದ್ದಾರೆ. ಹೀಗಾಗಿ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆತಂಕಗೊಳ್ಳುವ ಅಗತ್ಯವಿಲ್ಲ. ಬದಲಿಗೆ ಮುಂಜಾಗ್ರತಾ ಕ್ರಮವಾಗಿ ಎಚ್1ಎನ್1ಗೆ ಲಸಿಕೆ ಹಾಕಿಸಿಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲೆ ಶಿವಮೊಗ್ಗ ಜಿಲ್ಲೆ ಚಿಕ್ಕಜೋಗಿಹಳ್ಳಿಯ ವ್ಯಕ್ತಿ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಗ್ರಾಮವೊಂದರ ವ್ಯಾಪಾರಿಯೊಬ್ಬರು ಎಚ್1ಎನ್ 1ಗೆ ಬಲಿಯಾಗಿದ್ದರು.
ಪ್ರಯೋಗಾಲಯಗಳು: ಬೆಂಗಳೂರಿನ ನಿಮ್ಹಾನ್ಸ್, ನಾರಾಯಣ ನೇತ್ರಾಲಯ, ಮಣಿಪಾಲ್ ಆಸ್ಪತ್ರೆ, ಕಮಾಂಡ್ ಆಸ್ಪತ್ರೆ ಮತ್ತು ಉಡುಪಿಯ ಮಣಿಪಾಲ್ ಆಸ್ಪತ್ರೆಯ ಪರೀಕ್ಷಾ ಕೇಂದ್ರಗಳಲ್ಲಿ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. ನಿಮಾನ್ಸ್ ಮತ್ತು ಕೆ.ಎಂ.ಸಿ. ಮಣಿಪಾಲ್ನಲ್ಲಿ ಉಚಿತ ಪರೀಕ್ಷೆ ಮಾಡಲಾಗುವುದು. ಬೆಂಗಳೂರಿನ ಕಮಾಂಡ್ ಆಸ್ಪತ್ರೆ ಮತ್ತು ನಾರಾಯಣ ನೇತ್ರಾಲಯದಲ್ಲಿ ಸೈನಿಕರ ಕುಟುಂಬ ಹೊರತುಪಡಿಸಿ ಉಳಿದಂತೆ ಪ್ರತಿ ಪರೀಕ್ಷೆಗೆ 2,500 ರೂ. ನಿಗದಿಪಡಿಸಲಾಗಿದೆ.
ಆಸ್ಪತ್ರೆಗಳಲ್ಲಿ ಅಗತ್ಯ ಕ್ರಮ
ಎಚ್1ಎನ್1 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ 5 ಹಾಸಿಗೆಗಳ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 2 ಹಾಸಿಗೆಗಳ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ಗಳ ವ್ಯವಸ್ಥೆ ಕಲ್ಪಿಸಿದೆ. ಅಗತ್ಯ ಇದ್ದವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಅಗತ್ಯ ಲಸಿಕೆ ಖರೀದಿಸಲು 27.50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯಾದ್ಯಂತ 238 ಖಾಸಗಿ ಔಷಧಾಲಯಗಳಲ್ಲಿ ಟಾಮಿಫ್ಲೂ ಮಾತ್ರೆಗಳು ಮುಕ್ತವಾಗಿ ಲಭ್ಯವಿದೆ.
ಜಾಗೃತಿ ಕಾರ್ಯಕ್ರಮ
ಎಚ್1ಎನ್1 ಸೇರಿ ಇತರ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸಲು ದೂರದರ್ಶನ ಹಾಗೂ ರೇಡಿಯೋ ಮತ್ತು ರಾಜ್ಯದ 570 ಚಿತ್ರಮಂದಿರಗಳಲ್ಲಿ ಸ್ಲೆ್ಲೖಡ್ ಶೋಗಳಲ್ಲಿ ಜಾಹೀರಾತು ನೀಡಲಾಗುತ್ತಿದೆ. ಕೆಎಸ್ಆರ್ಟಿಸಿ , ಬಿಎಂಟಿಸಿ ಸೇರಿ 170 ಬಸ್ ನಿಲ್ದಾಣಗಳು, ಮೆಟ್ರೋ ಹಾಗೂ ರೈಲು ನಿಲ್ದಾಣಗಳಲ್ಲಿ ರೇಡಿಯೋ ಮೂಲಕ ಜಿಂಗಲ್ಸ್ ಹಾಗೂ ಕ್ಲಿಪ್ಪಿಂಗ್ಸ್ಗಳ ಮೂಲಕ ಎಚ್1ಎನ್1 ಕುರಿತು ಮಾಹಿತಿ ಹಾಗೂ ಜಾಗೃತಿ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮಂಗನ ಕಾಯಿಲೆಗೆ ಕೃಷಿಕ ಸಾವು
ಸಿದ್ದಾಪುರ(ಉತ್ತರ ಕನ್ನಡ): ತಾಲೂಕಿನ ಕೃಷಿಕನೊಬ್ಬ ಶುಕ್ರವಾರ ಮಂಗನಕಾಯಿಲೆಗೆ ಬಲಿಯಾಗಿದ್ದು, ಮಲೆನಾಡು ಭಾಗದಲ್ಲಿ ಮತ್ತೆ ಆತಂಕ ಶುರುವಾಗಿದೆ. ಲಂಬಾಪುರ ಗ್ರಾಪಂ ವ್ಯಾಪ್ತಿಯ ಮಳಗುಳಿಯ ಭಾಸ್ಕರ ಗಣಪತಿ ಹೆಗಡೆ (64)ಮೃತರು. ಫೆ.10ರಂದು ಭಾಸ್ಕರ ಹೆಗಡೆ ಸಣ್ಣ ಜ್ವರ ಎಂದು ವಂದಾನೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. 23 ರವರೆಗೂ ಸಿದ್ದಾಪುರದ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು ಆದರೂ ಜ್ವರ ಗುಣವಾಗದ ಕಾರಣ ಫೆ. 25ರಂದು ಶಿವಮೊಗ್ಗ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. 26ರಂದು ರಕ್ತ ತಪಾಸಣೆ ನಡೆಸಿದಾಗ ಅವರಿಗೆ ಮಂಗನ ಕಾಯಿಲೆ ಇರುವುದು ಖಚಿತವಾಗಿತ್ತು. ಫೆ.28ರಂದು ಸಾಯಂಕಾಲ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕೊಂಡೊಯ್ಯುವ ಮಾರ್ಗದಲ್ಲಿ ಆಗುಂಬೆ ಸಮೀಪ ವೃತರಾಗಿದ್ದಾರೆ ಎಂದು ಡಿಎಚ್ಒ ಡಾ. ಜಿ.ಎನ್.ಅಶೋಕ ಕುಮಾರ ಖಚಿತಪಡಿಸಿದ್ದಾರೆ. ಮಂಗನ ಕಾಯಿಲೆ ತಡೆಗೆ ಸಾಕಷ್ಟು ಲಸಿಕೆಗಳು ಲಭ್ಯವಿದ್ದು, ಗ್ರಾಮಸ್ಥರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದುವರೆಗೆ 18 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಿದ್ದಾಪುರದಲ್ಲೇ 62 ಪ್ರಕರಣ: ಕಳೆದ ವರ್ಷ ಸಿದ್ದಾಪುರ ತಾಲೂಕು ಒಂದರಲ್ಲೇ 62 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದವು. ಮೂವರು ಸಾವನ್ನಪ್ಪಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ 86 ಜನರಲ್ಲಿ ರೋಗ ಇರುವುದು ಖಚಿತವಾಗಿತ್ತು. 2020 ರಲ್ಲಿ ಸಿದ್ದಾಪುರದ ಇಬ್ಬರಲ್ಲಿ ಮಂಗನ ಕಾಯಿಲೆ ಖಚಿತವಾಗಿದ್ದು, ಒಬ್ಬರು ಮೃತಪಟ್ಟಿದ್ದು, ಇನ್ನೊಬ್ಬ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ.
ಶಿವಮೊಗ್ಗದಲ್ಲಿ ನಿಯಂತ್ರಣ: ಶಿವಮೊಗ್ಗ ಜಿಲ್ಲೆಯಲ್ಲಿ ಈ ವರ್ಷವೂ ಕೆಎಫ್ಡಿ (ಮಂಗನ ಕಾಯಿಲೆ) ವ್ಯಾಪಿಸಿದ್ದು, ತುಸು ನಿಯಂತ್ರಣದಲ್ಲಿದೆ. ಜ.11ರಂದು ಸಾಗರದ ತುಮರಿಯಲ್ಲಿ ಹೂವಮ್ಮ ಎಂಬುವವರು ಮೃತಪಟ್ಟಿದ್ದಾರೆ. 2.80 ಲಕ್ಷ ಲಸಿಕೆ ಹಾಕಲಾಗಿದೆ. ಒಂದು ಲಕ್ಷ ಡಿಎಂಪಿ ತೈಲ ವಿತರಿಸಲಾಗಿದೆ. ನಾಲ್ಕು ತಿಂಗಳಲ್ಲಿ 3,204 ಜನರ ಪರೀಕ್ಷೆ ನಡೆಸಿದ್ದು 65 ಮಂದಿಗೆ ಪಾಸಿಟಿವ್ ಬಂದಿದೆ. 70 ಮಂಗಗಳ 2,961 ಉಣ್ಣೆಗಳಲ್ಲಿ 19 ಪಾಸಿಟಿವ್ ಬಂದಿದೆ.
ಡೆಂಘೆಗೆ ಇಬ್ಬರು ಬಲಿ
ಗದಗ ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳಲ್ಲೇ ಇಬ್ಬರು ಬಾಲಕಿಯರು ಡೆಂಘೆ ಜ್ವರದಿಂದ ಮೃತಪಟ್ಟಿದ್ದಾರೆ. ರೋಣ ತಾಲೂಕಿನ ಕುರಡಗಿ ಗ್ರಾಮದ ಐದು ತಿಂಗಳ ಕೂಸು ಅಪೇಕ್ಷಾ ಅರಹುಣಸಿ, ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಆರು ತಿಂಗಳ ಕೂಸೊಂದು ಡೆಂಘೆ ಜ್ವರದಿಂದ ಮೃತಪಟ್ಟಿದೆ. ಆದರೆ, ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ದಾಖಲೆಯೇ ಇಲ್ಲ. ಆರೋಗ್ಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೂ ಇಲ್ಲ.