ಜಿಲ್ಲೆ

ಸಮೂಹ ಸಾರಿಗೆ ಬಳಕೆ ಮಾಡಲು ಹಲವು ಸಮಸ್ಯೆ

Mandara

ಬೆಂಗಳೂರು: ರಾಜಧಾನಿಯಲ್ಲಿ ಶೇ. 31 ಜನರು ಸಮೂಹ ಸಾರಿಗೆಗಿಂತ ಸ್ವಂತ ವಾಹನ ಬಳಕೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂಬ ವಿಚಾರ ಬಿ ಪ್ಯಾಕ್ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಸಮೂಹ ಸಾರಿಗೆ ಬಳಸುವಂತೆ ಜನರಲ್ಲಿ ಬಿಎಂಟಿಸಿ, ಬಿಎಂಆರ್​ಸಿಎಲ್ ಮನವಿ ಮಾಡಿಕೊಳ್ಳುತ್ತಿವೆ. ಆದರೂ, ಬಹುತೇಕ ಮಂದಿ ಸ್ವಂತ ವಾಹನಗಳಲ್ಲೇ ಸಂಚರಿಸುತ್ತಿದ್ದಾರೆ. ಸಮೂಹ ಸಾರಿಗೆ ಬಳಕೆ ಕುರಿತ ಸಮಸ್ಯೆಗಳೇ ಇದಕ್ಕೆ ಕಾರಣ ಎಂಬುದು ಬಿ-ಪ್ಯಾಕ್ ಸಂಸ್ಥೆ ನಡೆಸಿರುವ ಸರ್ವೆಯಲ್ಲಿ ಅನಾವರಣಗೊಂಡಿದೆ.

ಬಿಎಂಟಿಸಿ ಬಸ್ ಮತ್ತು ಮೆಟ್ರೋ ರೈಲು ನಿಲ್ದಾಣಗಳನ್ನು ತಲುಪಲು ಪರ್ಯಾಯ ವ್ಯವಸ್ಥೆ ಇಲ್ಲದಿರುವುದು, ಸಮರ್ಪಕ ನಿಲ್ದಾಣಗಳ ಕೊರತೆ, ನಿಗದಿತ ಸಮಯಕ್ಕೆ ಬಸ್​ಗಳು ಬಾರದಿರುವುದು ಸೇರಿ ಹಲವು ಕಾರಣಗಳಿಂದ ಸ್ವಂತ ವಾಹನಗಳ ಬಳಕೆಗೆ ಆದ್ಯತೆ ಕೊಡುತ್ತಿದ್ದೇವೆ ಎಂದು ಜನರು ತಿಳಿಸಿದ್ದಾರೆ.

ಆನ್​ಲೈನ್ ಸರ್ವೆ: ಬಿ-ಪ್ಯಾಕ್ ಸಂಸ್ಥೆ ಆನ್​ಲೈನ್ ಮೂಲಕ ನಡೆಸಲಾದ ಸಮೀಕ್ಷೆಯಲ್ಲಿ 1,129 ಜನರು ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಶೇ. 69 ಸಮೂಹ ಸಾರಿಗೆ ಬಳಸುತ್ತಿರುವ ಕುರಿತು ತಿಳಿಸಿದ್ದಾರೆ. ಅವರಲ್ಲಿ ಶೇ. 53 ಜನರು ಬಸ್, ಮೆಟ್ರೋ ನಿಲ್ದಾಣಕ್ಕೆ ನಡೆದುಕೊಂಡು ಬರುತ್ತಿದ್ದಾರೆ.

ಶೇರಿಂಗ್​ನಲ್ಲಿ ಮಹಿಳೆಯರ ಮೇಲುಗೈ: ವಾಹನಗಳನ್ನು ಹಂಚಿಕೊಂಡು (ಶೇರಿಂಗ್) ಪ್ರಯಾಣ ಮಾಡುವ ವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನವರಾಗಿದ್ದಾರೆ. ಬಸ್, ಮೆಟ್ರೋ ನಿಲ್ದಾಣಗಳಿಗೆ ಕಾರು ಅಥವಾ ಆಟೋಗಳ ಮೂಲಕ ಶೇ. 65 ಮಹಿಳೆಯರು ಶೇರಿಂಗ್ ವಾಹನ ಬಳಸುವುದಾಗಿ ತಿಳಿಸಿದ್ದಾರೆ.