ವಿಜಯವಾಣಿ ಸುದ್ದಿಜಾಲ ಮುಂಡರಗಿ
ಲಾಕ್ಡೌನ್ ಸಡಿಲಿಕೆ ಮಾಡಿರುವ ಕಾರಣ ಜನತೆ ಮುಂಜಾಗ್ರತೆ ವಹಿಸದೇ ನಿರಾತಂಕವಾಗಿ ಓಡಾಡುತ್ತಿದ್ದಾರೆ. ತಹಸೀಲ್ದಾರ್ ಡಾ. ವೆಂಕಟೇಶ ನಾಯಕ ಅವರು ಮೇ 5ರಿಂದ ಕೆಲ ಷರತ್ತುಗಳನ್ನು ವಿಧಿಸಿ ಅಂಗಡಿಗಳನ್ನು ತೆರೆಯುವುದಕ್ಕೆ ಅನುಮತಿ ನೀಡಿದ್ದಾರೆ. ಆದರೆ, ಅಂಗಡಿಗಳ ಮುಂದೆ ಪರಸ್ಪರ ಅಂತರ ಕಾಯ್ದುಕೊಳ್ಳದೆ ಜನರು ಗುಂಪು ಗುಂಪಾಗಿ ಸೇರುವುದು ಸಾಮಾನ್ಯವಾಗಿದೆ. ಅನಗತ್ಯವಾಗಿ ಓಡಾಡುವವರ ಸಂಖ್ಯೆ ಹೆಚ್ಚುತ್ತಿದೆ.
ಲಾಕ್ಡೌನ್ ಇದ್ದಾಗ ಸಣ್ಣ ಕಾಯಿಲೆಗಳಿಗೆ ಮನೆ ಮದ್ದು ಬಳಸುತ್ತಿದ್ದ ಜನ ಈಗ ಲಾಕ್ಡೌನ್ ಸಡಿಲಿಕೆಯಿಂದ ಆಸ್ಪತ್ರೆ ಕಡೆ ಮುಖ ಮಾಡುತ್ತಿದ್ದಾರೆ. ಕಟ್ಟುನಿಟ್ಟಿನ ಲಾಕ್ಡೌನ್ ಸಮಯದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕೆ 50 ರಿಂದ 100 ಜನರು ಹೊರರೋಗಿಗಳಾಗಿ (ಒಪಿಡಿ) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಲಾಕ್ಡೌನ್ ಸಡಿಲಿಕೆ ನಂತರ ನಿತ್ಯ 200ಕ್ಕೂ ಹೆಚ್ಚು ಜನರು ಒಪಿಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲೂ ಹೆಚ್ಚು ಜನರು ಚಿಕಿತ್ಸೆ ಪಡೆದುಕೊಳ್ಳುವುದು ಕಂಡುಬರುತ್ತಿದೆ.
ಲಾಕ್ಡೌನ್ ಇದ್ದಾಗ ಉತ್ತಮ ಆರೋಗ್ಯ ಹೊಂದಿ ಮನೆಯಲ್ಲೇ ಇರುತ್ತಿದ್ದರು ಎನ್ನುವಂತಿತ್ತು. ಆದರೆ, ಸಡಿಲಿಕೆ ಮಾಡಿದಾಕ್ಷಣ ಸಣ್ಣಪುಟ್ಟ ಕಾಯಿಲೆಗೂ ಆಸ್ಪತ್ರೆ ಮುಂದೆ ಸರದಿ ನಿಂತುಕೊಳ್ಳುತ್ತಿದ್ದಾರೆ. ಮಾನಸಿಕವಾಗಿ ಸದೃಢತೆ ಹೊಂದಿದರೆ ಸಣ್ಣ ಪುಟ್ಟ ಕಾಯಿಲೆಗಳನ್ನು ಮನೆಯಲ್ಲೇ ಇದ್ದು ನಿವಾರಿಸಿಕೊಳ್ಳಬಹುದು. ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ ಎಂದು ಪರಸ್ಪರ ಅಂತರ ಕಾಯ್ದುಕೊಳ್ಳದೆ ಅನಗತ್ಯವಾಗಿ ಓಡಾಡಬಾರದು. ಕರೊನಾ ಬಗ್ಗೆ ಎಚ್ಚರವಿರಬೇಕು ಎನ್ನುತ್ತಾರೆ ತಾಲೂಕು ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಡಾ. ಕುಮಾರಸ್ವಾಮಿ ಹಿರೇಮಠ.
ರಸ್ತೆಗಿಳಿದ ಮುಖ್ಯಾಧಿಕಾರಿ ಹಣ್ಣು, ತರಕಾರಿ ಕೊಳ್ಳಲು ತಳ್ಳುಗಾಡಿಗಳ ಮುಂದೆ ಹೆಚ್ಚು ಗ್ರಾಹಕರು ಗುಂಪಾಗಿ ಕಂಡಬಂದ ಹಿನ್ನೆಲೆಯಲ್ಲಿ ಸ್ವತಃ ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ ಅವರು ರಸ್ತೆಗಳಿದು ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ತಿಳಿಹೇಳಿದರು. ಮಾಸ್ಕ್ ಹಾಕಿಕೊಳ್ಳದವರಿಗೆ 200 ರೂ. ದಂಡ ವಿಧಿಸಿದರು. ಮೇ 4ರಂದು 1,600 ರೂ., 5ರಂದು 1,200 ರೂ. ಹಾಗೂ 6 ರಂದು 1,000 ರೂ. ದಂಡ ಸಂಗ್ರಹಿಸಲಾಗಿದೆ.