ಹಿರೀಸಾವೆ: ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರಗಳನ್ನು ಏರ್ಪಡಿಸುವ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಎಚ್.ಪಿ.ಮೋಹನ್ ಹೇಳಿದರು.
ಪಟ್ಟಣದ ಶ್ರೀ ಸಮುದಾಯ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ತಾಲೂಕು ಘಟಕ, ಮೈಸೂರಿನ ನಾರಾಯಣ ಆಸ್ಪತ್ರೆ, ವಿಸೆಕ್ಯೂರ್ ಕ್ವಿಕ್ ಇನ್ಶೂರೆನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ, ರಕ್ತದಾನ, ಕಾನೂನು ಅರಿವು ಶಿಬಿರದಲ್ಲಿ ಮಾತನಾಡಿ, ದಿನ ನಿತ್ಯದ ಕೆಲಸ ಕಾರ್ಯಗಳ ಒತ್ತಡದಿಂದ ಜನರು ಆರೋಗ್ಯವನ್ನು ನಿರ್ಲಕ್ಷೃ ಮಾಡುತ್ತಿರುವುದರಿಂದ ಯಾವ ಕ್ಷಣದಲ್ಲಿ ಬೇಕಾದರೂ ಅನಾರೋಗ್ಯರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ತಾಲೂಕು ಘಟಕದ ಸಭಾಪತಿ ಭರತ್‌ಕುಮಾರ್ ಮಾತನಾಡಿ, ಒಬ್ಬರ ರಕ್ತದಾನದಿಂದ ನಾಲ್ಕು ಜನರ ಜೀವ ಉಳಿಯುತ್ತದೆ ಎಂದರು.
ಶಿಬಿರದಲ್ಲಿ 97 ಜನರು ರಕ್ತದಾನ ಮಾಡಿದರೆ 350ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಹಿರೀಸಾವೆ ಆರಕ್ಷಕ ವೃತ್ತ ನಿರೀಕ್ಷಕ ಎಸ್.ಸಂತೋಷ್ ಚನ್ನರಾಯಪಟ್ಟಣ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಯುವರಾಜ್, ಹಿರೀಸಾವೆ ಆಸ್ಪತ್ರೆಯ ಡಾ. ಶಿವಸ್ವಾಮಿ, ಚಲನಚಿತ್ರ ನಟಿ ಶುಭಾ ರಕ್ಷಾ, ಐಡಿಎಫ್ ಬ್ಯಾಂಕ್ ಅಧಿಕಾರಿ ಆಶಾ ಕುಮಾರಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಜಯೇಂದ್ರ ಕುಮಾರ್, ಉದಯಕುಮಾರ್, ತಾಲೂಕ ಘಟಕದ ಕಿಶೋರ್ ಕುಮಾರ್, ಜಬೀವುಲ್ಲಾ ಬೇಗ್, ಜಾಗರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ, ಸಮುದಾಯ ಭವನದ ಮಾಲೀಕ ಬಾಲಕೃಷ್ಣ ಮತ್ತಿತರರು ಇದ್ದರು.