ಲಿಂಗೈಕ್ಯ ಶ್ರೀಗಳ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಶ್ರೀಗಳು.  
ಜಿಲ್ಲೆ

ಜನರಿಗೆ ಬೇಕು ಗುರುವಿನ ಅನುಗ್ರಹ

Shivamogga - Desk - Praveena Kumar S

ಶಿಕಾರಿಪುರ: ಸಮಾಜವನ್ನು ಉದ್ಧಾರದ ಹೆದ್ದಾರಿಯಲ್ಲಿ ಸಾಗುವಂತೆ ಮಾಡುವವನೇ ಗುರು ಎಂದು ಎಂದು ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಶನಿವಾರ ತೊಗರ್ಸಿಯಲ್ಲಿ ಪಂಚವಣ್ಣಿಗೆ ಮಠದ ಲಿಂಗೈಕ್ಯ ಶ್ರೀಗಳ ಆರಾಧನಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿ, ಜನ್ಮಾಂತರಗಳ ಪಾಪ ಕ್ಷಯವಾಗಲು ಶ್ರೀ ಗುರುವಿನ ಅಭಯಾನುಗ್ರಹ ಬೇಕು. ಮಠಗಳು ಭಕ್ತರು ಮತ್ತು ಭಗವಂತನ ನಡುವೆ ಸೇತುವೆ ಇದ್ದ ಹಾಗೆ ಎಂದರು. ಮಳೆಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯಶ್ರೀಗಳು ಶಿಕ್ಷಣ ಪ್ರೇಮಿಯಾಗಿದ್ದರು. ಅರವತ್ತರ ದಶಕದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರೌಢಶಾಲೆಗಳು ಹೆಚ್ಚು ಇರದ ಕಾರಣ. ಶಿಕ್ಷಣ ಸಂಸ್ಥೆ ಸ್ಥಾಪಿಸಿಅದರ ಮೂಲಕ ನಾಲ್ಕು ಪ್ರೌಢಶಾಲೆಗಳನ್ನು ಸ್ಥಾಪನೆ ಮಾಡಿ ಅಕ್ಷರದಾಸೋಹ ಮಾಡಿದರು. ಈಗ ಈ ಸಂಸ್ಥೆಗಳಿಂದ ಪ್ರತಿವರ್ಷ ಸಹಸ್ರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಹೊರಬರುತ್ತಿದ್ದಾರೆ. ಅವರು ಕಾಯಕಯೋಗಿಯಾಗಿದ್ದರು. ಜತೆಗೆ ಕೃಷಿ ಪ್ರೇಮಿಯಾಗಿದ್ದರು ಎಂದರು. ಕೋಣಂದೂರಿನ ಶ್ರೀಪತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂದೆ ಪ್ರತಿ ಸಾಮ್ರಾಜ್ಯ ಕಟ್ಟುವಾಗಲೂ ಗುರುಗಳ ಮಾರ್ಗದರ್ಶನವಿತ್ತು. ಧರ್ಮೋತ್ಥಾನ, ಸಮಾಜೋತ್ಥಾನ ಮತ್ತು ಜೀವಶಿವಸೇವೆಗಾಗಿ ಗುರುಗಳು ತಮ್ಮನ್ನು ಸಮರ್ಪಿಸಿಕೊಂಡಿರುತ್ತಾರೆ ಎಂದರು. ತೊಗರ್ಸಿ ಮಳೆಹಿರೇಮಠದ ಕಿರಿಯ ಶ್ರೀ ಅಭಿನವ ಮಹಾಂತ ಸ್ವಾಮೀಜಿ ಇದ್ದರು. ಸಾಲೂರು ಹಿರೇಮಠದ ಶ್ರೀ ಗುರುಲಿಂಗಮ ಶಿವಾಚಾರ್ಯಸ್ವಾಮಿಗಳ ನೇತೃತ್ವದಲ್ಲಿ ಪ್ರಾತಃಕಾಲ ಲಿಂಗೈಕ್ಯ ಗುರುಗಳ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿವಿದ ಪೂಜಾ ವಿಧಾನಗಳು ನೆರವೇರಿದವು. ಲಿಂಗೈಕ್ಯ ಗುರುಗಳ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು.