ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿಎಲ್ಲ ಜಲಾಶಯಗಳು ಭರ್ತಿಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬುಧವಾರದಿಂದ ಹೆಚ್ಚುವರಿ ನೀರು ಹೊರಬಿಡಲಾಗುತ್ತಿದೆ. ಜಲಾನಯನ ಪ್ರದೇಶದ ಜನರು ಎಚ್ಚರಿಕೆಯಿಂದ ಇರಬೇಕು. ಜಿಲ್ಲಾಡಳಿತವು ಎಲ್ಲ ಕಡೆ ಕಟ್ಟೆಚ್ಚರ ವಹಿಸಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಾಪುರ ಬ್ಯಾರೇಜ್‌ನಿಂದ ಪ್ರತಿದಿನ 1.35 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಲ್ಲೋಳ ಬ್ಯಾರೇಜಿನಿಂದ ಹಿಪ್ಪರಗಿ ಬ್ಯಾರೇಜ್‌ವರೆಗೆ 1.50 ಲಕ್ಷ ಕ್ಯೂಸೆಕ್ ಹೊರಬಿಡಲಾಗುತ್ತಿದೆ. ಹಿಡಕಲ್ ಜಿಲಾಶಯದಲ್ಲಿ ಒಟ್ಟು 51 ಟಿಎಂಸಿ ಕ್ಷಮತೆ ಇದ್ದು, ಹಿನ್ನೀರು ಸೇರಿ 43 ಟಿಎಂಸಿ ನೀರು ಸಂಗ್ರಹವಾಗಿದೆ. ಪ್ರತಿದಿನ ನೀರು ಹೊರ ಬಿಡಲಾಗುತ್ತಿದೆ. ಕೃಷ್ಣಾ ಚಿಕ್ಕೋಡಿ, ರಾಯಬಾಗ, ನಿಪ್ಪಾಣಿ ಕಾಗವಾಡ ತಹಸೀಲ್ದಾರ್ ಜತೆ ಚರ್ಚಿಸಲಾಗಿದೆ. ಹುಲಗಬಾಳಿ-ಮಾಂಗಬಸ್ತಿ, ಸತ್ತಿ, ಹಳಿಯಾಳ, ತಂಗಡಿ ಶಿನಾಳಕ್ಕೆ ನೀರು ನುಗ್ಗುವ ಸಾಧ್ಯತೆಯಿದ್ದು, ಗ್ರಾಮಸ್ಥರಿಗೆ ಮಾಹಿತಿ ನೀಡುವಂತೆ ತಹಸೀಲ್ದಾರ್‌ಗೆ ಸೂಚಿಸಲಾಗಿದೆ. ಕಾಗವಾಡ ಉಗಾರ, ಬಣಜವಾಡಗಳಲ್ಲಿ ಕೆಲ ರಸ್ತೆಗಳ ಸಂಪರ್ಕ ಕಡಿತಗೊಳ್ಳಲಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಘಟಪ್ರಭೆಯಲ್ಲಿ ನೀರಿನ ಮಟ್ಟ ಹೆಚ್ಚಾದರೆ ಹುಕ್ಕೇರಿ, ಗೋಕಾಕ ಮತ್ತು ಮೂಡಲಗಿ ತಾಲೂಕಿನ ಕೆಲ ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆಯಿದೆ. ಗೋಕಾಕನಲ್ಲಿ ಯಾವುದೆ ತೊಂದರೆ ಇಲ್ಲ. ಅಂಕಲಗಿಯಲ್ಲಿ ಬಳ್ಳಾರಿ ನಾಲೆ ನೀರು ಹೊಲಗಳಿಗೆ ಬರುವ ಸಾಧ್ಯತೆ ಇದೆ. ಕುಂದರಗಿ ಅಡವಿ ಸಿದ್ದೇಶ್ವರ ಮಠದಲ್ಲಿ ನೀರು ನುಗ್ಗುವ ಸಾಧ್ಯತತೆಯಿದ್ದು, ಇಲ್ಲಿನ ಜನರನ್ನು ಅಂಕಲಿ ಮಠಕ್ಕೆ ಸ್ಥಳಾಂತರಿಸಲಾಗಿದೆ. ಮೂಡಲಗಿಯಲ್ಲಿಯೂ ಗಮನಹರಿಸಲಾಗುತ್ತಿದೆ ಎಂದರು.
ಖಾನಾಪುರ ತಾಲೂಕಿನಲ್ಲಿ ಮಳೆಗಾಲದಲ್ಲಿ ಉಂಟಾಗುವ ಘೋರ ಪರಿಸ್ಥಿತಿ ನಿರ್ವಹಿಸಲು ಬೆಳಗಾವಿ ಜಿಲ್ಲಾಡಳಿತದಿಂದ ಹೆಚ್ಚು ಮುತುವರ್ಜಿ ವಹಿಸಲಾಗುತ್ತಿದೆ. ಖಾನಾಪುರ ಕಾನನ ಮತ್ತು ದುರ್ಗಮ ತಾಲೂಕು. ಮಳೆಯ ತೀವ್ರತೆ ಅಧಿಕವಾಗಿರುತ್ತದೆ. ಜನಜೀವನ ಅಸ್ತವ್ಯಸ್ತವಾಗುತ್ತದೆ. ಈಚೆಗೆ ಅಮಗಾಂವನಲ್ಲಿ ಎದೆನೋವಿನಿಂದ ಬಳಲಿದ ಮಹಿಳೆಯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ದಟ್ಟಾರಣ್ಯ ತಾಳೇವಾಡಿಯಲ್ಲಿ ವಾಸಿಸುವ ಜನರಿಗೆ ಅವಶ್ಯ ವಸ್ತು, ದಿನಸಿ ಮತ್ತು ಔಷಧಗಳ ಪೂರೈಕೆ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಮಾತನಾಡಿ, ಅಥಣಿ, ಕಾಗವಾಡ, ಚಿಕ್ಕೋಡಿ ಮತ್ತು ಸದಲಗಾಕ್ಕೆ ಭೇಟಿ ನೀಡಿ, ಪರಿಶೀಲಿಸಲಾಗಿದೆ. ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವೇಳೆ ಗುಡ್ಡ ಕೊರೆತಕ್ಕೆ ಬ್ಲಾಸ್ಟಿಂಗ್ ನಡೆಸದಂತೆ ನಿಷೇಧ ಹೇರಲಾಗಿದೆ. ಜಿಲ್ಲೆಯ 73 ಸೇತುವೆಗಳಲ್ಲಿ 25 ಸೇತುವೆಗಳು ಸಂಪರ್ಕ ಕಳೆದುಕೊಂಡಿದ್ದು, ಪರ್ಯಾಯ ಮಾರ್ಗ ನೀಡಲಾಗಿದೆ. ಕೆಲವೆಡೆ ಮೊಸಳೆ ಕಂಡಿವೆ. ನೀರಿನ ಸೆಳೆತ ಅಧಿಕವಾಗಿದ್ದು, ಯಾರೂ ಕೂಡ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಗುಳೇದ ತಿಳಿಸಿದರು.
ಮಹಾನಗರ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್, ಎಸ್ಪಿ ಡಾ.ಭೀಮಾಶಂಕರ ಗುಳೇದ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ್ ಮೀನಾ ಸುದ್ದಿಗೋಷ್ಠಿಯಲ್ಲಿದ್ದರು.