ಇಳಕಲ್ಲ (ಗ್ರಾ): ಪ್ರಸಕ್ತ ವರ್ಷದ ಬೇಸಿಗೆಯ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನತೆಯ ನೆತ್ತಿ ಸುಡುವ ಕಾಯಕದಲ್ಲಿರುವ ಸೂರ್ಯನ ಪ್ರಖರತೆಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ.
ಒಣಗುತ್ತಿರುವ ಗಂಟಲಿನ ದಾಹ ನೀಗಿಸಿಕೊಳ್ಳಲು ಮಜ್ಜಿಗೆ ಸೇರಿದಂತೆ ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ಬಿಸಿಲಿನ ತಾಪದ ಕಾರಣದಿಂದಾಗಿ ನಗರದ ಮುಖ್ಯ ರಸ್ತೆಗಳು ಸಹ ಮಧ್ಯಾಹ್ನ 12ರಿಂದ ಸಂಜೆ 5 ಗಂಟೆಯವರೆಗೆ ಜನರ ಓಡಾಡ ಕಡಿಮೆಯಾಗಿದೆ. ಎಳನೀರು, ಲಿಂಬೆಹಣ್ಣಿನ ಜ್ಯೂಸ್, ಕಲ್ಲಂಗಡಿ, ಐಸ್‌ಕ್ರೀಮ್ ಕಬ್ಬಿನ ಹಾಲು ಮತ್ತಿತರ ಪಾನೀಯಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಸಹಜವಾಗಿ ಅವುಗಳ ದರವೂ ಹೆಚ್ಚಳಗೊಂಡಿದೆ.
2 ರೂ.ಗೆ ಒಂದರಂತೆ ಸಿಗುತ್ತಿದ್ದ ಲಿಂಬೆ ಹಣ್ಣು 5 ರೂ.ಗೆ ಏರಿಕೆಯಾಗಿದೆ. ಸೋಡಾ ಶರಬತ್ 20 ರೂ., ಉಳಿದ ಎಲ್ಲ ಹಣ್ಣುಗಳ ಜ್ಯೂಸ್ 25 ರಿಂದ 30 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಎಳನೀರು ದರ ಸಹ ಗಗನಕ್ಕೆ ತಲುಪಿದ್ದು, 55 ರಿಂದ 60 ರೂ. ತಲುಪಿದೆ.
ಬಿಸಿಲು ಅಧಿಕವಾಗಿರುವುದರಿಂದ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಾಯಾರಿಕೆ ಇಲ್ಲದಿದ್ದರೂ ಕೂಡ ನೀರು ಸೇವಿಸುವುದು ಅವಶ್ಯ. ದ್ರವ ಆಹಾರಕ್ಕೆ ಆದ್ಯತೆ ನೀಡುವುದರ ಜತೆಗೆ ನೀರಿನಾಂಶ ಇರುವಂತಹ ಹಣ್ಣುಗಳನು ್ನಸೇವಿಸಬೇಕು. ತಿಳಿ ಬಣ್ಣದ ಮತ್ತು ಕಾಟನ್ ಬಟ್ಟೆ ಧರಿಸುವುದು ಒಳ್ಳೆಯದು. ಡಾ.ಚೇತನಾ ಶ್ಯಾವಿ ವೈದ್ಯಾಧಿಕಾರಿ, ಸರ್ಕಾರಿ ಆಸ್ಪತ್ರೆ, ಇಳಕಲ್ಲ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ವೃದ್ಧರು ಮನೆಯಿಂದ ಹೊರಗೆ ಬರುವುದು ಸೂಕ್ತವಲ್ಲ. ಅವಶ್ಯಕ ಕೆಲಸಗಳಿದ್ದರೆ ಬೇರೆ ಯಾರಿಂದಾದರೂ ಸಹಾಯ ಪಡೆಯುವುದು ಉತ್ತಮ. ಮನೋಹರ ದೊಡ್ಡಮನಿ ಆರೋಗ್ಯ ನಿರೀಕ್ಷಕ ನಗರಸಭೆ, ಇಳಕಲ್ಲ