ಜಿಲ್ಲೆ

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಸಂಕಷ್ಟ

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಲವು ಭ್ರಷ್ಟಾಚಾರಗಳ ಕಾರಣದಿಂದ ರಾಜ್ಯದ ಜನತೆ ನಲುಗಿದ್ದಾರೆ. ಜತೆಗೆ ದಿನನಿತ್ಯದ ಪದಾರ್ಥಗಳ ದರ ಏರಿದ್ದು, ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಜೆಡಿಎಸ್ ವಕ್ತಾರ ಎನ್.ಆರ್.ರವಿಚಂದ್ರೇಗೌಡ ಆರೋಪಿಸಿದರು.

ಗ್ಯಾರಂಟಿ ಯೋಜನೆ ಕುರಿತು ಮಾತನಾಡುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರನ್ನು ಕುಡುಕರನ್ನಾಗಿ ಮಾಡಿ ಹಾಳುಮಾಡುತ್ತಿದೆ. ಇದರೊಡನೆ ವಿದ್ಯುತ್ ದರ ಏರಿಕೆ ಜತೆಗೆ ನಿಯಮ ಮೀರಿ ಎಲ್ಲ ಎಸ್ಕಾಂಗಳಲ್ಲಿ ಸ್ಮಾರ್ಟ್ ಮೀಟರ್ ಹಗರಣ ನಡೆಸುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

ಆರ್ಥಿಕ ಹಾಗೂ ತಾಂತ್ರಿಕ ಸಾಮರ್ಥ್ಯವಿಲ್ಲದ ರಾಜಶ್ರೀ ಕಂಪನಿಯ ಜೇಬು ತುಂಬಿಸಲು ಹಾಗೂ ಅವರ ಮುಖಾಂತರ ಇವರು ಜೇಬುಗಳನ್ನು ತುಂಬಿಕೊಳ್ಳಲು ಜನರಿಗೆ ಬೇಕಿಲ್ಲದಿದ್ದರೂ ವಿದ್ಯುತ್ ಸ್ಮಾರ್ಟ್ ಮೀಟರ್ ಆಳವಡಿಸಿ ನಿರ್ವಹಿಸಲು ಗುತ್ತಿಗೆ ನೀಡುತ್ತಿದ್ದಾರೆ ಎಂದು ದೂರಿದರು.

ಮುಡಾ ಹಗರಣ ನ್ಯಾಯಾಲದಲ್ಲಿ ಬಾಕಿ ಇದೆ. ಆದರೂ ಕ್ಲೀನ್‌ಚಿಟ್ ನೀಡಲಾಗಿದೆ ಎಂದು ಹೇಳಿಕೊಳ್ಳುತ್ತಿರುವುದು ನ್ಯಾಯಾಂಗ ನಿಂದನೆ ಆಗುತ್ತದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಸರ್ಕಾರ ಇಂತಹ ಕೀಳು ಪ್ರಚಾರ, ಜನರ ವಿರೋಧಿ ನೀತಿಯನ್ನು ನಿಲ್ಲಿಸಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ, ಹಿರಿಯ ಉಪಾಧ್ಯಕ್ಷ ಫಾಲ್ಕಾನ್ ಬೋರೇಗೌಡ, ಮುಖಂಡರಾದ ರಾಜಶೇಖರ್, ಪ್ರಕಾಶ್ ಇದ್ದರು.