ಹನೂರು: ಹಾಸನದಲ್ಲಿ ನಡೆದ ಕಾಂಗ್ರೆಸ್‌ನ ಸ್ವಾಭಿಮಾನಿ ಸಮಾವೇಶಕ್ಕೆ ಗುರುವಾರ ಹನೂರು ಭಾಗದಲ್ಲಿ ಸಂಚರಿಸುತ್ತಿದ್ದ ಕೆಲ ಕೆಎಸ್‌ಆರ್‌ಟಿಸಿ ಬಸ್‌ಗಳು ತೆರಳಿದ್ದ ಪರಿಣಾಮ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಬಸ್‌ಗಳ ಕೊರತೆಯಿಂದ ತೊಂದರೆ ಅನುಭವಿಸಿದರು.
ಹಾಸನದ ಸಮಾವೇಶಕ್ಕೆ ತೆರಳುವ ಹಿನ್ನೆಲೆಯಲ್ಲಿ ಹನೂರು ಭಾಗದಲ್ಲಿ ಪಂಚಾಯಿತಿ ಕೇಂದ್ರ ಸ್ಥಾನ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿರುವ ಗ್ರಾಮಗಳಿಗೆ ಸಾರಿಗೆ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ಇದರಲ್ಲಿ ಬೇರೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ಗಳ ಜತೆಗೆ ಈ ಭಾಗದಲ್ಲಿ ಪ್ರತಿನಿತ್ಯ ಸಂಚರಿಸುತ್ತಿದ್ದ ಬಸ್‌ಗಳು ಸಹ ತೆರಳಿದ್ದವು. ಹಾಗಾಗಿ ಬಸ್ ಸಮಸ್ಯೆ ಉಂಟಾಯಿತು. ಬಸ್ ಸಂಚಾರದಲ್ಲಿ ವ್ಯತಯವಾಗಲಿದೆ. ಆದ್ದರಿಂದ ಸಾರ್ವಜನಿಕರು ಆಗಮಿಸುವ ಬಸ್‌ನಲ್ಲಿ ತೆರಳಿ ಸಹಕರಿಸಬೇಕು ಎಂದು ಪಟ್ಟಣದ ಬಸ್ ನಿಲ್ದಾಣದಲ್ಲಿ ಧ್ವನಿವರ್ಧಕದ ಮೂಲಕ ತಿಳಿಸಲಾಗುತ್ತಿತ್ತು. ಬೆರಳೆಣಿಕೆಯಷ್ಟು ಸಂಚರಿಸುತ್ತಿದ್ದ ಬಸ್‌ಗಳು ಕಿಕ್ಕಿರಿದು ತುಂಬಿದ್ದವು.
ಆದರೂ ತಾಲೂಕಿನ ವಿವಿಧ ಗ್ರಾಮಗಳಿಂದ ಕೆಲಸ ಕಾರ್ಯಗಳ ನಿಮಿತ್ತ ಹನೂರು, ಕೊಳ್ಳೇಗಾಲ ಹಾಗೂ ಇನ್ನಿತರ ಕಡೆಗಳಿಗೆ ತೆರಳುವ ಜನರು ವಿಧಿಯಿಲ್ಲದೆ ನಿಂತುಕೊಂಡೇ ತೆರಳಿದರು. ಹಾಗೆಯೇ ಊರಿಗೆ ಹಿಂತಿರುಗುವಾಗ ಗಂಟೆಗಟ್ಟಲೇ ಕಾದು ಕೂರುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಮಹಿಳೆಯರು ಹಾಗೂ ವೃದ್ಧರು ಹೆಚ್ಚಿನ ತೊಂದರೆ ಅನುಭವಿಸಿದರು. ಬಸ್ ಕೊರತೆಯನ್ನು ಅರಿತ ಕೆಲವರು ಖಾಸಗಿ ಬಸ್‌ಗಳ ಮೊರೆ ಹೋದರು. ಇದರಿಂದ ಖಾಸಗಿ ಬಸ್‌ಗಳು ಸಹ ಗುರುವಾರ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದವು.
ಕಾದು ಕುಳಿತ ವಿದ್ಯಾರ್ಥಿಗಳು: ಇನ್ನು ಬೆಳಗ್ಗೆ ಪಟ್ಟಣ ಸೇರಿದಂತೆ ಗ್ರಾಮಗಳಲ್ಲಿನ ವಿದ್ಯಾರ್ಥಿಗಳು ಬಸ್ ಕೊರತೆಯಿಂದಾಗಿ ಕೊಳ್ಳೇಗಾಲದ ಶಾಲಾ-ಕಾಲೇಜುಗಳಿಗೆ ನಿಗದಿತ ಸಮಯಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಲವರು ನೂಕು-ನುಗ್ಗಲಿನಲ್ಲೇ ನಿಂತುಕೊಂಡೇ ತೆರಳಿದರೆ, ಇನ್ನು ಕೆಲ ವಿದ್ಯಾರ್ಥಿಗಳು ಬಸ್‌ಗಾಗಿ ಕಾದು ಕುಳಿತು ತೊಂದರೆ ಅನುಭವಿಸಿದರು. ಇತ್ತ ತಾಲೂಕಿನ ಕೆಲವೊಂದು ಮಾರ್ಗಗಳಿಗೆ ಬಸ್ ಇಲ್ಲದ ಪರಿಣಾಮ ಕೆಲ ಶಿಕ್ಷಕರು ಶಾಲೆಗಳಿಗೆ ಬೈಕ್‌ನಲ್ಲಿ ತೆರಳಿದರೆ, ಮತ್ತೆ ಕೆಲವರು ಖಾಸಗಿ ಬಸ್ ಮೂಲಕವೇ ತೆರಳಬೇಕಾಯಿತು.
ಬಸ್ ತಳ್ಳಿದ ಪ್ರಯಾಣಿಕರು: ಗುರುವಾರ ತಾಲೂಕು ವ್ಯಾಪ್ತಿಯಲ್ಲಿ ಬಸ್ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸಿದ್ದು ಒಂದೆಡೆಯಾದರೆ, ಇತ್ತ ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಅಜ್ಜೀಪುರ ಸಮೀಪದ ಆಂಜನೇಯಸ್ವಾಮಿ ಕಣಿವೆಯ ಎತ್ತರವಾಗಿದ್ದ ಸ್ಥಳದಲ್ಲಿ ಜಲ್ಲಿಪಾಳ್ಯದ ಕಡೆಯಿಂದ ಕೊಳ್ಳೇಗಾಲದತ್ತ ಸಂಚರಿಸುತ್ತಿದ್ದ ಸಾರಿಗೆ ಬಸ್ ಚಲಿಸಲು ಸಾಧ್ಯವಾಗದೇ ನಿಂತಿತು. ಇದರಿಂದ ರೈತ ಸಂಘಟನೆಯ ಪದಾಧಿಕಾರಿಗಳು ಹಾಗೂ ಪ್ರಯಾಣಿಕರೇ ಕೆಳಗಿಳಿದು ಬಸ್ ತಳ್ಳುವಂತಾಯಿತು. ಬಸ್ ಅವ್ಯವಸ್ಥೆಯ ಬಗ್ಗೆ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಆಕ್ಷೇಪ ವ್ಯಕ್ತಪಡಿಸಿದರು.