ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವುದು 
ಜಿಲ್ಲೆ

ಕಲುಷಿತ ಕುಡಿವ ನೀರು ಕುಡಿದು ಜನರು ಅಸ್ವಸ್ಥ

ಅಭಿನಯ್ ಎಚ್.ಎಂ

ಯಳಂದೂರು: ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರು ಸೇವಿಸಿ 6ಕ್ಕೂ ಹೆಚ್ಚು ಜನರು ಬುಧವಾರ ರಾತ್ರಿ ಅಸ್ವಸ್ಥರಾಗಿದ್ದಾರೆ.

ಜಲಜೀವನ್ ಯೋಜನೆಯಡಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗಿರುವ ಪೈಪ್ ಒಡೆದಿದ್ದು, ಇದರಿಂದ ಕಲುಷಿತ ನೀರು ಸೇರಿದೆ ಎನ್ನಲಾಗಿದೆ. ಇದನ್ನು ಸೇವಿಸಿರುವ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ.

ಈ ಸಂಬಂಧ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವರಿಗೆ ಚಿಕಿತ್ಸೆ ನೀಡಲಾಗಿದ್ದು ಮತ್ತೆ ಕೆಲವರು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗ್ರಾಮಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ಪಂಚಾಯತ್‌ರಾಜ್ ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಹಾಗೂ ಪಿಡಿಒ ನೇತೃತ್ವದ ತಂಡ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ. ಇಲ್ಲಿಗೆ ನೀರು ಪೂರೈಕೆ ಮಾಡುವ ಪೈಪ್ ಅನ್ನು ದುರಸ್ತಿಗೊಳಿಸಲಾಗಿದ್ದು, ನೀರು ಸಂಗ್ರಹಿಸುವ ತೊಂಬೆಯನ್ನೂ ಶುಚಿಗೊಳಿಸಲಾಗಿದೆ.

ನೀರು ಸೇವಿಸಿ ಅಸ್ವಸ್ಥಗೊಂಡವರ ಮನೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ಪತಾಸಣೆ ನಡೆಸಿದ್ದಾರೆ ಎಂದು ಪಿಡಿಒ ಮಂಜುನಾಥ್ ಮಾಹಿತಿ ನೀಡಿದ್ದಾರೆ.