ಜಿಲ್ಲೆ

ಬೀದಿ ನಾಯಿಗಳ ಕಾಟಕ್ಕೆ ಬೆದರಿದ ಜನ

ಶ್ವಾನಗಳ ಹಾವಳಿ ತಡೆಯಲು ಬಂಗಾರಪೇಟೆ ಪುರಸಭೆ ವಿಫಲ| ಭಯದಲ್ಲೇ ಸಂಚರಿಸುವ ಸ್ಥಿತಿ

ಪಟ್ಟಣದಲ್ಲಿ ಬೀದಿನಾಯಿ ಹಾವಳಿಗೆ ನಾಗರಿಕರು ರೋಸಿ ಹೋಗಿದ್ದು, ಪುರಸಭೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಎಲ್ಲಿ ನೋಡಿದರೂ ಬೀದಿ ನಾಯಿಗಳ ದರ್ಬಾರ್​, ಯಾವ ಗಲ್ಲಿಯಲ್ಲಿ ನೋಡಿದರೂ ಕನಿಷ್ಠ 20 ರಿಂದ 25 ಬೀದಿ ನಾಯಿಗಳ ಹಿಂಡು ಕಾಣಿಸುತ್ತಿದೆ. ಜತೆಗೆ ಪ್ರತಿನಿತ್ಯ ನಾಯಿ ಕಡಿತಗಳ ಪ್ರಕರಣಗಳೂ ಹೆಚ್ಚಾಗುತ್ತಿದ್ದು, ವೃದ್ಧರು, ಮಹಿಳೆಯರು ವಾಯುವಿಹಾರಕ್ಕೆ ತೆರಳಲು, ಮಕ್ಕಳನ್ನು ಹೊರಗಡೆ ಆಟವಾಡಲು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಸ್ವಲ್ಪ ಯಾಮಾರಿದರೆ ಕಚ್ಚಿ, ಗಂಭೀರ ಗಾಯಗೊಳಿಸುತ್ತಿವೆ. ಪರಿಣಾಮ ಕೆಲ ಮಾರ್ಗಗಳಲ್ಲಿ ನಾಗರಿಕರು ಸಂಚರಿಸಲು ಚಿಂತಿಸುವಂತಾಗಿದೆ.

ಬೀದಿನಾಯಿಗಳ ಹಾವಳಿ ನಿಯಂತ್ರಣ ಮಾಡಲು ಪುರಸಭೆ ರ್ನಿಲಕ್ಷ$್ಯತೋರುತ್ತಿರುವುದರಿಂದ ನಾಗರಿಕರು ತೊಂದರೆ ಪಡುವಂತಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಸಂಗ್ರಹ ಹಾಗೂ ಮಾಂಸದ ಅಂಗಡಿ ತ್ಯಾಜ್ಯದಿಂದ ದಿನೇ ದಿನೆ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ.

ಬೀದಿ ನಾಯಿ ನಿಯಂತ್ರಿಸಲು ಸಂತಾನ ಶಕ್ತಿ ಹರಣ ಚಿಕಿತ್ಸೆ ಪರಿಣಾಮಕಾರಿ ವಿಧಾನವಾಗಿದ್ದರೂ ಪುರಸಭೆ ಕಳೆದ 7&8 ತಿಂಗಳ ಹಿಂದೆ ಹಲವು ಬೀದಿ ನಾಯಿಗಳಿಗೆ ಚಿಕಿತ್ಸೆಗೊಳಪಡಿಸಿ ನಂತರ ತಟಸ್ಥವಾಗಿದೆ. ಆದರೆ, ಈಗ ಮೂರು ಪಟ್ಟು ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ಗಮನಿಸಿದರೆ, ಎಷ್ಟರ ಮಟ್ಟಿಗೆ ಪುರಸಭೆ ಚಿಕಿತ್ಸೆ ನೀಡಿದೆ ಎಂಬುದನ್ನು ತಿಳಿಯಬಹುದಾಗಿದೆ.

ಪ್ರತಿವರ್ಷ ಬೀದಿನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಲು ಫುರಸಭೆ ಅನುದಾನ ಮೀಸಲಿಟ್ಟಿದ್ದು, ಈ ಅನುದಾನವನ್ನು ಎಷ್ಟರ ಮಟ್ಟಿಗೆ ಸದ್ಬಳಕೆ ಮಾಡಲಾಗಿದೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಒಂದು ವೇಳೆ ನಡೆದುಕೊಂಡೊ ಅಥವಾ ಬೈಕ್​ನಲ್ಲಿ ಚಲಿಸಿವಾಗ ನಾಯಿಗಳು ಮೇಲೆ ಎಗರಿ ಕಚ್ಚಿ ಗಾಯಗೊಳಿಸಿದ ಉದಾಹರಣೆಗಳು ಇವೆ. ಹಾಗಾಗಿ ಅದಷ್ಟು ಬೇಗ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನಾಯಿಗಳಿಂದ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಾಗರಿಕರು ಎದುರಿಸುತ್ತಿರುವ ಬೀದಿ ನಾಯಿಗಳ ಹಾವಳಿ ಬಗ್ಗೆ ಸುಪ್ರೀಂ ಕೋರ್ಟ್​ ನೀಡಿರುವ ನಿರ್ದೇಶನವನ್ನು ಪುರಸಭೆ ಪಾಲಿಸುತ್ತಿಲ್ಲ. ಪಾದಚಾರಿಗಳಿಗೆ ಮತ್ತು ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಬರುವುದರಿಂದ ಅಪಘಾತ ಸಂಭವಿಸುತ್ತಿವೆ. ಕೋಳಿ ಮಾಂಸದ ಅಂಗಡಿಗಳ ಮುಂಭಾಗ ಇರುವ ಹಲವು ನಾಯಿಗಳಿಗೆ ಚರ್ಮರೋಗಗಳು ಕಾಣಿಸಿಕೊಂಡಿವೆ. ಇದರಿಂದ ರೋಗ ಹರಡುವ ಸಾಧ್ಯತೆಗಳು ಹೆಚ್ಚಾಗಿದೆ. ಹಾಗಾಗಿ ಜಿಲ್ಲಾಡಳಿತ ಹಾಗೂ ಪುರಸಭೆ ಅಧಿಕಾರಿಗಳು ಸುಪ್ರೀಂ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. | ಕಲಾವಿದ ಯಲ್ಲಪ್ಪ, ಬಂಗಾರಪೇಟೆ

-ವಿ.ಶಿವಾರೆಡ್ಡಿ ಬಂಗಾರಪೇಟೆ