ರೋಣ: ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿರುವ ಜಿಗಳೂರ ಗ್ರಾಪಂ ವ್ಯಾಪ್ತಿಯ ಸರ್ವೆ ನಂ. 173/3ರಲ್ಲಿ ಕಂಪನಿಯೊಂದು ಅಕ್ರಮವಾಗಿ ಮಿಕ್ಸರ್ ಘಟಕ ಸ್ಥಾಪಿಸಿದ್ದು, ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಆದರೆ, ಕಳೆದ ಕೆಲ ದಿನಗಳಿಂದ ಘಟಕ ಸ್ಥಗಿತಗೊಂಡಿದೆ.
ಕಳೆದ ಕೆಲ ವರ್ಷಗಳ ಹಿಂದೆ ಘಟಕ ನಿರ್ವಿುಸಲಾಗಿದೆ. ಇಲ್ಲಿ ಸಿದ್ಧಪಡಿಸುವ ಮಿಶ್ರಣವನ್ನು ತಾಲೂಕಿನ ಕಾಲುವೆ ಕಾಮಗಾರಿಗೆ ಬಳಸಲಾಗುತ್ತದೆ. ಕೃಷಿ ಭೂಮಿಯನ್ನು ಕೃಷಿಯೇತರ (ಎನ್ಎ) ಎಂದು ಪರಿವರ್ತನೆ ಮಾಡದೆ ಅಕ್ರಮವಾಗಿ ಘಟಕ ಸ್ಥಾಪಿಸಲಾಗಿದ್ದು, ಇದರಿಂದ ಅಕ್ಕಪಕ್ಕದ ಕೃಷಿ ಜಮೀನುಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಘಟಕದ ಪಕ್ಕದಲ್ಲಿಯೇ ಬೃಹತ್ ಪ್ರಮಾಣದಲ್ಲಿ ಮೊರಂ(ಗರಸು) ತೆಗೆದು ಕಾಲುವೆ ಕಾಮಗಾರಿ ಸೇರಿದಂತೆ ಇನ್ನಿತರ ವಾಣಿಜ್ಯ ಉದ್ದೇಶಗಳಿಗೆ ಸಾಗಿಸಲಾಗುತ್ತಿದೆ. ಪಟ್ಟಣದಿಂದ ಕೂಗಳತೆಯಲ್ಲೇ ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಹೆಸ್ಕಾಂನಿಂದ ಪರವಾನಗಿ ತೆಗೆದುಕೊಳ್ಳದೆ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಜತೆಗೆ ಜಮೀನು ಮಾಲೀಕರಿಗೆ ಇದುವರೆಗೂ ಯಾವುದೇ ಹಣ ಸಂದಾಯ ಮಾಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ದೂರಿನ ಮೇರೆಗೆ ತಹಸೀಲ್ದಾರರು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ, ಸ್ಥಳದಲ್ಲಿ ಸದ್ಯಕ್ಕೆ ಯಾವುದೇ ಚಟುವಟಿಕೆ ನಡೆಯುತ್ತಿದ್ದುದು ಕಂಡುಬಂದಿಲ್ಲ.
ದೂರಿನನ್ವಯ ಮಿಕ್ಸರ್ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಕಳೆದ ಹಲವು ದಿನಗಳಿಂದ ಘಟಕ ಸ್ಥಗಿತಗೊಂಡಿರುವುದು ತಿಳಿದುಬಂದಿದೆ. ಕಂಪನಿಯು ನಮ್ಮ ಇಲಾಖೆಯಿಂದ ಪರವಾನಗಿ ಪಡೆದಿಲ್ಲ. | ಕೆ. ನಾಗರಾಜ, ತಹಸೀಲ್ದಾರ್ ರೋಣ ತಾಲೂಕಿನಾದ್ಯಂತ ಇಂತಹ ಹಲವಾರು ಅಕ್ರಮ ಘಟಕಗಳಿವೆ. ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. | ದೊಡ್ಡಬಸಪ್ಪ ನವಲಗುಂದ, ತಾಲೂಕು ರೈತ ಸಂಘದ ಕಾರ್ಯದರ್ಶಿ ತಾತ್ಕಾಲಿಕವಾಗಿ ಘಟಕ ಸ್ಥಾಪಿಸಿದ್ದೆವು. ಅದು ಸ್ಥಗಿತಗೊಂಡು ಬಹಳ ದಿನಗಳಾಗಿವೆ. ಇಲ್ಲಿನ ಕೆಲಸಗಾರರಿಗೆ ಸಂದಾಯ ಮಾಡಲು ನಮ್ಮ ಬಳಿ ಹಣವಿಲ್ಲ. I ಶಂಕರಗೌಡ ಪಾಟೀಲ, ಕಂಪನಿಯ ರೋಣ ಘಟಕ ವ್ಯವಸ್ಥಾಪಕ