ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಂಧನೂರಲ್ಲಿ ಶಾಸಕ ವೆಂಕಟರಾವ ನಾಡಗೌಡಗೆ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಮನವಿ ಸಲ್ಲಿಸಿತು. 
ಜಿಲ್ಲೆ

ಪಿಂಚಣಿ ಸೌಲಭ್ಯ ಕೊಡಿಸಲು ಒತ್ತಾಯಿಸಿ ಶಾಸಕ ವೆಂಕಟರಾವ ನಾಡಗೌಡಗೆ ನೌಕರರ ಮನವಿ

ಸಿಂಧನೂರು: ಅನುದಾನಿತ, ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರಿಂದ 31ವರೆಗೆ ಸ್ಟ್ರೈಕ್ ಫ್ರಮ್ ಹೋಮ್‌ಗೆ ನಿರ್ಧಾರಿಸಲಾಗಿದ್ದು, ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಒತ್ತಾಯಿಸಿ ಶಾಸಕ ವೆಂಕಟರಾವ ನಾಡಗೌಡಗೆ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಗುರುವಾರ ಮನವಿ ಸಲ್ಲಿಸಿತು.

2006ರಲ್ಲಿ ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ಅನುದಾನಿತ ಶಾಲೆಗಳಲ್ಲಿ ನೇಮಕವಾಗಿ ವೇತನ ಪಡೆಯುತ್ತಿದ್ದು, ವಿದ್ಯಾ ಸಂಸ್ಥೆಗಳು ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಅಥವಾ ವಂತಿಗೆ ಆಧಾರಿತ ನೂತನ ಪಿಂಚಣಿ ಸೌಲಭ್ಯ ದೊರೆತಿಲ್ಲ. ಈ ರೀತಿಯ ತಾರತಮ್ಯ ಬೇರೆ ರಾಜ್ಯಗಳಲಿಲ್ಲ. ಅನುದಾನಿತ ನೌಕರರ ಪಿಂಚಣಿ ವಿಚಾರದಲ್ಲಿ ರಾಜ್ಯದಲ್ಲಿ ಮಾತ್ರ ಅನ್ಯಾಯವಾಗಿದೆ. 6ನೇ ವೇತನ ಆಯೋಗವು ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಪಿಂಚಣಿ ಬೇಡಿಕೆ ಇಟ್ಟುಕೊಂಡು ಹೋರಾಟ ಮಾಡಲಾಗಿದೆ. ಆದರೆ ಬೇಡಿಕೆ ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಧೋರಣೆ ಖಂಡಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ.

ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಲು ಶಾಸಕರು ಒತ್ತಡ ಹಾಕಬೇಕು. ಸರ್ಕಾರದ ಸ್ಪಂದನೆ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ವಾಲ್ಮೀಕಿ, ತಾಲೂಕು ಘಟಕ ಅಧ್ಯಕ್ಷ ಡಿ.ವಿ.ನಾಯಕ, ಅನುದಾನಿತ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಹುಸೇನಪ್ಪ ಗೊರೇಬಾಳ ಇದ್ದರು.