Pension Adalat 
ಜಿಲ್ಲೆ

ಸೂಕ್ತ ದಾಖಲೆ ನೀಡಿ ಸಾಮಾಜಿಕ ಭದ್ರತಾ ಸೌಲಭ್ಯ ಪಡೆಯಿರಿ

ಶಿವರಾಜ.ಎಂ

ಗ್ರೇಡ್ 2 ತಹಸೀಲ್ದಾರ್ ಭಾಗ್ಯಾ ಸಲಹೆ

ತ್ಯಾಮಗೊಂಡ್ಲಲ್ಲಿ ಪಿಂಚಣಿ ಅದಾಲತ್

ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನ ಸೇರಿ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಅನುಷ್ಠಾನ ಮಾಡಿದ್ದು, ಅರ್ಹರು ಅಗತ್ಯ ದಾಖಲೆ ನೀಡಿ, ಸೌಲಭ್ಯ ಪಡೆಯಬೇಕು ಎಂದು ನೆಲಮಂಗಲ ತಾಲೂಕು ಆಡಳಿತದ ಗ್ರೇಡ್ 2 ತಹಸೀಲ್ದಾರ್ ಭಾಗ್ಯಾ ತಿಳಿಸಿದರು.
ಪಟ್ಟಣದ ನಾಡಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್‌ನಲ್ಲಿ ಮಾತನಾಡಿದರು.
ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿ ಅಂಚೆ ಇಲಾಖೆಯಿಂದ ಸಮರ್ಪಕವಾಗಿ ಪಿಂಚಣಿ ವಿತರಿಸುತ್ತಿಲ್ಲ ಎಂಬ ದೂರುಗಳಿವೆ. ಆದ್ದರಿಂದ ಫಲಾನುಭವಿಗಳು ಸ್ಥಳೀಯ ಬ್ಯಾಂಕ್‌ಗಳಲ್ಲಿ ಖಾತೆ ತೆರೆದರೆ ನೇರವಾಗಿ ಹಣ ಜಮಾವಣೆಯಾಗಲಿದೆ. ಅರ್ಹರು ಪಿಂಚಣಿ ಪಡೆಯಲು ಸೂಕ್ತ ದಾಖಲೆ ನೀಡಿ, ಅರ್ಜಿ ಸಲ್ಲಿಸಬೇಕು. ಪ್ರಮಾಣ ಪತ್ರಗಳು ಇದ್ದರೂ ಮಾಸಾಶನ ಸ್ಥಗಿತವಾಗಿದ್ದರೆ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದರೆ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಟಿ.ಎಚ್.ಮಲ್ಲೇಶ್ ಮಾತನಾಡಿ, ಪಿಂಚಣಿ ಪಡೆಯುವವರ ಬಳಿ ಮಾಸಾಶನ ನೀಡುವವರು ಸೌಜನ್ಯಯುತವಾಗಿ ವರ್ತಿಸಬೇಕು. ದಾಖಲಾತಿ ನೀಡಲು ಜಾಗೃತಿ ಮೂಡಿಸಬೇಕು. 6 ತಿಂಗಳಿಂದ ಪಿಂಚಣಿ ವ್ಯವಸ್ಥೆ ಸರಿ ಇಲ್ಲದೆ, ಇಕೆವೈಸಿ ಹೆಸರಿನಲ್ಲಿ ಪಿಂಚಣಿ ತಡೆ ಹಿಡಿಯಲಾಗಿದೆ. ಪಿಂಚಣಿ ಪಡೆಯುವವರು ಕೆಲವರು ಅನಕ್ಷರಸ್ತರಿದ್ದು, ಅದನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಅಂತಹವರಿಗೆ ಅಂಚೆ ಕಚೇರಿ ಮತ್ತು ಬ್ಯಾಂಕ್‌ಗಳಲ್ಲಿ ಸಹಾಯ ಮಾಡಬೇಕು ಎಂದರು.
ರಾಜಸ್ವ ನಿರೀಕ್ಷಕ ರವಿಕುಮಾರ್ ಮಾತನಾಡಿ, ಪ್ರತಿ ತಿಂಗಳು ಒಂದೊಂದು ಹೋಬಳಿಯಲ್ಲಿ ಪಿಂಚಣಿ ಅದಾಲತ್ ನಡೆಸಲು ಸರ್ಕಾರ ಆದೇಶ ನೀಡಿದ್ದು, ಪಿಂಚಣಿಗೆ ಸಂಬಂಧಿಸಿದ ದೂರುಗಳಿಗೆ ಪರಿಹಾರ ದೊರಕಿಸಲಾಗುವುದು. ಹೊಸ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಹೋಬಳಿಯ 25 ಫಲಾನುಭವಿಗಳಿಗೆ ವಿವಿಧ ಪಿಂಚಣಿ ಸೌಲಭ್ಯದ ಆದೇಶ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಿಬ್ಬಂದಿ ಮುನಿರಾಜು, ಬೈಲಮ್ಮ, ಅಂಚೆ ಇಲಾಖೆ ಪೋಸ್ಟ್‌ಮನ್ ರಂಗಸ್ವಾಮಿ, ರಾಮಣ್ಣ, ಕೆನರಾ ಬ್ಯಾಂಕ್ ಅಧಿಕಾರಿ ಮಹೇಶ್, ಮುಖಂಡ ಅರುಣ್ ಇದ್ದರು.