ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ  
ಜಿಲ್ಲೆ

ಪೆನ್‌ಡ್ರೈವ್ ಪ್ರಕರಣ ಪರಿಷತ್ ಚುನಾವಣೆ ಮೇಲೆ ಪರಿಣಾಮ ಬೀರದು: ಸಂಸದ ಬಿ.ವೈ.ರಾಘವೇಂದ್ರ

ಮಂಜುನಾಥ ತಿಮ್ಮಯ್ಯ

ಮೈಸೂರು: ಪೆನ್‌ಡ್ರೈವ್ ಪ್ರಕರಣದಿಂದ ವಿಧಾನ ಪರಿಷತ್ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿ.ವೈ.ರಾಘವೇಂದ್ರ ಹೇಳಿದರು.


ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಯಿಂದ ಕ್ಷೇತ್ರಕ್ಕೆ ಯಾವ ರೀತಿ ಅನುಕೂಲ ಆಗುತ್ತದೆ ಎಂಬುದನ್ನು ಜನರು ನೋಡುತ್ತಾರೆಯೇ ಹೊರತು ವೈಯಕ್ತಿಕ ವಿಚಾರವನ್ನು ರಾಜಕೀಯಕ್ಕೆ ತರುವುದಿಲ್ಲ ಎಂಬುದು ನನ್ನ ಅನಿಸಿಕೆ ಎಂದು ಹೇಳಿದರು.


ಈಗಾಗಲೇ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕರು ಉತ್ತರ ನೀಡಿದ್ದಾರೆ. ಈ ವಿಚಾರದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ಆದ್ದರಿಂದ ನಾನು ಹೇಳುವಂತಹದ್ದು ಏನೂ ಇಲ್ಲ ಎಂದರು.


ಬಿಜೆಪಿ- ಜೆಡಿಎಸ್‌ಮೈತ್ರಿಕೂಟದ ಬಲದಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಅದೇ ರೀತಿ ಪದವೀಧರರ, ಶಿಕ್ಷಕರ ಕ್ಷೇತ್ರದಿಂದ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯಲ್ಲೂ ಗೆಲುವು ದಾಖಲಿಸುವ ವಿಶ್ವಾಸ ಇದೆ ಎಂದು ಹೇಳಿದರು.


ಈ ಸಲ ವಿಧಾನಪರಿಷತ್ ಚುನಾವಣೆಗೆ ಮೈತ್ರಿಯ ಬಲವಿದೆ. ನಾವು ಈ ಬಾರಿ ಗೆದ್ದೇ ಗೆಲ್ಲುತ್ತೇವೆ. ನೈರುತ್ಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಆಗಿರುವ ಕೆ.ರಘುಪತಿ ಭಟ್ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅವರೊಂದಿಗೆ ಪಕ್ಷದ ಮುಖಂಡರು ಮಾತನಾಡಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದರು.


ನಾಮಪತ್ರ ವಾಪಸ್ ಪಡೆಯಲು ಇನ್ನೂ ಮೂರು ದಿನ ಕಾಲಾವಕಾಶವಿದೆ. ಅಷ್ಟರಲ್ಲಿ ಎಲ್ಲವನ್ನೂ ಸರಿ ಮಾಡುತ್ತಾರೆ. ಕಾರ್ಯಕರ್ತರೇ ನಮ್ಮ ಪಕ್ಷದ ಬಲ. ಅವರ ಬಲದಿಂದ ನಾವು ಚುನಾವಣೆ ಎದುರಿಸಿ ಗೆಲ್ಲುವ ನಂಬಿಕೆ ಇದೆ ಎಂದು ಹೇಳಿದರು.


ಕಳೆದ ಬಾರಿಗಿಂತ ಈ ಸಲ ಹೆಚ್ಚಿನ ಮತಗಳ ಅಂತರದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೆಲ್ಲುತ್ತೇನೆ. ಚುನಾವಣಾ ಆಯೋಗಕ್ಕೆ ಕೆ.ಎಸ್.ಈಶ್ವರಪ್ಪ ದೂರು ಕೊಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಚುನಾವಣಾ ಫಲಿತಾಂಶ ಹೊರ ಬಂದ ಮೇಲೆ ಮಾತನಾಡುವೆ. ಈಶ್ವರಪ್ಪ ಬಂಡಾಯ ಸ್ಪರ್ಧೆಯಿಂದ ನನ್ನ ಗೆಲುವಿಗೆ ಯಾವ ಅಡ್ಡಿಯೂ ಇಲ್ಲ ಎಂದರು.


ಬಿಜೆಪಿ ನಿರೀಕ್ಷೆ ಇಟ್ಟುಕೊಂಡಿರುವಂತೆ ದೇಶದಲ್ಲಿ 400 ಕ್ಷೇತ್ರಗಳಿಗೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಈಗ ನಡೆದಿರುವ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತಿವೆ ಎಂದರು.


ಇದಕ್ಕೂ ಮೊದಲು ನಜರ್‌ಬಾದ್‌ನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ನೈರತ್ಯ ಶಿಕ್ಷಕರ ಕ್ಷೇತ್ರದ ಸಭೆಯಲ್ಲಿ ಪಾಲ್ಗೊಂಡಿದ್ದರು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಶಾಸಕ ಚನ್ನಬಸಪ್ಪ, ಅಭ್ಯರ್ಥಿ ಧನಂಜಯ ಸರ್ಜಿ ಮತ್ತಿತರರು ಪಾಲ್ಗೊಂಡಿದ್ದರು.