ಜಿಲ್ಲೆ

ರೈಲ್ವೆ ಮಂಡಳಿ ಅನುಮೋದನೆಗೆ ಕಾಯುತ್ತಿರುವ ಕರಾವಳಿ ಕರ್ನಾಟಕದ ಪ್ರಸ್ತಾವನೆಗಳು

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ, ಉಡುಪಿ ಸಹಿತ ಕರ್ನಾಟಕ ಕರಾವಳಿ ಅಭಿವೃದ್ಧಿಗೆ ಸಂಬಂಧಿಸಿ ದಕ್ಷಿಣ ರೈಲ್ವೆ, ನೈರುತ್ಯ ರೈಲ್ವೆ, ಕೊಂಕಣ ರೈಲ್ವೆ ಸಹಿತ ವಿವಿಧ ರೈಲ್ವೆ ವಿಭಾಗಗಳಿಂದ ಕಳುಹಿಸಿರುವ ಹಲವು ಪ್ರಮುಖ ಪ್ರಸ್ತಾವನೆಗಳು ಅನುಮೋದನೆಯಾಗದೆ ಕೇಂದ್ರ ರೈಲ್ವೆ ಮಂಡಳಿ ಎದುರು ಬಾಕಿ ಉಳಿದಿವೆ.
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಜುಲೈ 17 ರಂದು ಮಂಗಳೂರಿನಲ್ಲಿ ರೈಲ್ವೆ ಅಧಿಕಾರಿಗಳ ಸಭೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ರೈಲ್ವೆ ಯಾತ್ರಿಗಳ ಬೇಡಿಕೆಗಳು ಮರುಜೀವ ಪಡೆದಿವೆ.

  • ಗೋಮಟೇಶ್ವರ ಸೆಂಟ್ರಲ್‌ಗೆ
    ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ- ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು (16539/ 16540) ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವಂತೆ ದಕ್ಷಿಣ ರೈಲ್ವೆಯು 2024, ಫೆಬ್ರವರಿ 27 ರಂದು ರೈಲ್ವೆ ಮಂಡಳಿಗೆ ಕಳುಹಿಸಿದೆ.
    ಈ ಬೇಡಿಕೆ ಪೂರೈಸಲು ಯಾವುದೇ ತಾಂತ್ರಿಕ ಅಡ್ಡಿ ಇರುವುದಿಲ್ಲ. ಆದರೆ ರೈಲ್ವೆ ಮಂಡಳಿ ಲ್ಲಿಯ ತನಕ ಅನುಮೋದನೆ ನೀಡಿಲ್ಲ.
  • ವಿಜಯಪುರಕ್ಕೆ ಎಕ್ಸ್‌ಪ್ರೆಸ್ ರೈಲು
    ಪ್ರಸ್ತುತ ವಿಶೇಷ ರೈಲು ಆಗಿ ಓಡುತ್ತಿರುವ ಮಂಗಳೂರು ಜಂಕ್ಷನ್- ವಿಜಯಪುರ ತತ್ಕಾಲ್ ರೈಲನ್ನು ಎಕ್ಸ್‌ಪ್ರೆಸ್ ರೈಲು ಆಗಿ ರೆಗುಲರೈಸ್ (ನಿಯತವಾಗಿ) ಮಾಡುವಂತೆ ನೈರುತ್ಯ ರೈಲ್ವೆಯು 2022, ಸೆಪ್ಟಂಬರ್ 12 ರಂದು ರೈಲ್ವೆ ಮಂಡೆ ಪ್ರಸ್ತಾವನೆ ಕಳುಹಿಸಿದೆ.
    ತತ್ಕಾಲ್ ಆಗಿ ಓಡುವ ರೈಲುಗಳನ್ನು ಪ್ರತೀ ಆರು ತಿಂಗಳಿಗೊಮ್ಮೆ ಸೇವೆಯ ಅನುಮತಿಯನ್ನು ನವೀಕರಣಗೊಳಿಸಬೇಕು. ಅಲ್ಲದೆ ತತ್ಕಾಲ್ ವಿಶೇಷ ರೈಲುಗಳ ಪ್ರತಿ ಪ್ರಯಾಣದ ಟಿಕೆಟ್ ದರ ರೆಗುಲರ್ ಆಗಿ ಪ್ರಯಾಣಿಸುವ ರೈಲುಗಳ ಪ್ರತಿ ಟಿಕೆಟ್ ಪ್ರಯಣ ದರಕ್ಕಿಂತ ಸುಮಾರು ಶೇ.30 ಅಧಿಕವಿರುತ್ತದೆ.
  • ಭಾವನಗರ ಸುಪರ್ ಫಾಸ್ಟ್ ಎಕ್ಸ್‌ಪ್ರೆಸ್
    ಮಂಗಳೂರು ಜಂಕ್ಷನ್- ಭಾವನಗರ (ಗುಜರಾತ್) ಟರ್ಮಿನಸ್ ಸಾಪ್ತಾಹಿಕ ಸುಪರ್ ಫಾಸ್ಟ್ ಎಕ್ಸ್‌ಪ್ರೆಸ್ ಆರಂಭಿಸುವ ಕುರಿತು ಬೆಂಗಳೂರಿನಲ್ಲಿ 2022, ಜೂನ್ 8 ರಂದು ನಡೆದ ರೈಲ್ವೆ ಅಂತರ್ ವಲಯ ಸಮ್ಮೇಳನದಲ್ಲಿ ತೆಗೆದುಕೊಂಡ ತೀರ್ಮಾನಕ್ಕೂ ರೈಲ್ವೆ ಮಂಡಳಿ ಅನುಮೋದನೆ ಒದಗಿಸಿಲ್ಲ.
  • ಮಂಗಳೂರು- ಶಿವಮೊಗ್ಗ ಸಂಪರ್ಕ
    ಹೊನ್ನಾವರ- ತಾಳಗುಪ್ಪ ನಡುವೆ ಸುಮಾರು 80 ಕಿ.ಮೀ ರೈಲು ಮಾರ್ಗ ರಚಿಸುವ ಮೂಲಕ ಮಂಗಳೂರು- ಶಿವಮೊಗ್ಗ ರೈಲು ಸಂಪರ್ಕ ಒದಗಿಸಬೇಕು ಎನ್ನುವುದು ಪಶ್ಚಿಮ ರೈಲ್ವೆ ಯಾತ್ರಿ ಸಂಘದ ಇನ್ನೊಂದು ಪ್ರಮುಖ ಬೇಡಿಕೆ. ಈ ಬಗ್ಗೆ ನೈರುತ್ಯ ರೈಲ್ವೆಯು ಅನುಮತಿಗಾಗಿ ರೈಲ್ವೆ ಮಂಡಳಿಗೆ ಸಮಗ್ರ ಯೋಜನಾ ವರದಿ (ಡಿಪಿಆರ್) ಕಳುಹಿಸಿದೆ. ಇನ್ನೂ ಅನುಮೋದನೆ ದೊರೆತ್ತಿಲ್ಲ.
    ರೈಲ್ವೆ ಯಾತ್ರಿ ಸಂಘಗಳು, ಸಾರ್ವಜನಿಕರು ಸಾಮಾನ್ಯವಾಗಿ ವಿವಿಧ ಬೇಡಿಕೆಗಳನ್ನು ಸಂಬಂಧಪಟ್ಟವರಿಕೆ ಕಳುಹಿಸುತ್ತದೆ. ಆದರೆ ಯಾವುದೇ ರೈಲ್ವೆ ವಿಭಾಗ, ವಲಯ ಜನರ ಬೇಡಿಕೆ ಸಂಬಂಧಿಸಿ ಕಾರ್ಯಸಾಧುವೇ ? ಎಂದು ಅಧ್ಯಯನ ನಡೆಸಿ, ತಾಂತ್ರಿಕ ಅಂಶಗಳನ್ನು ಪರಿಗಣಿಸಿ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸುತ್ತದೆ. ಆದ್ದರಿಂದ ಇಂತಹ ಪ್ರಸ್ತಾವನೆಗಳನ್ನು ತಡೆಹಿಡಿಯಲು ಯಾವುದೇ ಕಾರಣಗಳಿಲ್ಲ.