ಜಿಲ್ಲೆ

ಮಾಸ್ಕ್ ಹಾಕದವರಿಗೆ ದಂಡ ಬಿಸಿ

Udupi

ಉಡುಪಿ: ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದು, ನಗರದ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕದ ಜನರಿಗೆ ದಂಡ ಬಿಸಿ ಮುಟ್ಟಿಸಲಾಗಿದೆ. ಸಾರ್ವಜನಿಕ ಮತ್ತು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಾಸ್ಕ್ ಧರಿಸದ 63 ಮಂದಿಗೆ ತಲಾ 100ರೂ.ನಂತೆ 6300ರೂ. ದಂಡ ವಸೂಲಿ ಮಾಡಲಾಗಿದೆ. ಕಡ್ಡಾಯ ಮಾಸ್ಕ್ ಅಥವಾ ಫೇಸ್ ಕವರ್ ಧರಿಸಬೇಕು ಮತ್ತು ಸುರಕ್ಷತೆ ಅಂತರ ಪಾಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮೇ 10ರಂದು ಆದೇಶ ಹೊರಡಿಸಿದ್ದು, ಅದರಂತೆ ನಗರಸಭೆ ಪೌರಾಯುಕ್ತರ ನಿರ್ದೇಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ನಗರಸಭೆ ಪರಿಸರ ಅಭಿಯಂತರ ಸ್ನೇಹಾ, ಆರೋಗ್ಯ ನಿರೀಕ್ಷಕ ಕರುಣಾಕರ ಮತ್ತು ಶಶಿರೇಖಾ ನೇತೃತ್ವದ ತಂಡ ಸಾರ್ವನಿಕರ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ಸ್ಥಳದಲ್ಲೇ ದಂಡ ವಿಧಿಸಿ ಕ್ರಮ ತೆಗೆದುಕೊಳ್ಳುತ್ತಿದೆ. ಮಾಸ್ಕ್ ಧರಿಸದಿದ್ದವರಿಗೆ ಜಿಲ್ಲೆಯ ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ 100ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

30 ಬುಲೆಟ್ ವಶಕ್ಕೆ: ಬುಲೆಟ್ ಬೈಕ್‌ಗಳ ಸೈಲೆನ್ಸರ್‌ಗಳನ್ನು ಮಾರ್ಪಡಿಸಿ ಕರ್ಕಶ ಶಬ್ಧ ಮಾಡುತ್ತ ನಗರದಲ್ಲಿ ತಿರುಗಾಡುತ್ತಿದ್ದ ಯುವಕರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕಳೆದ ಒಂದು ವಾರದಿಂದ ಶಬ್ದ ಮಾಲಿನ್ಯ ಮಾಡುತ್ತಿರುವ 30 ಬುಲೆಟ್‌ಗಳನ್ನು ನಗರ ಸಂಚಾರ ಪೊಲೀಸ್ ಠಾಣೆ ಪೊಲೀಸರು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ. ಕಲ್ಸಂಕ, ಅಂಬಲಪಾಡಿ, ಸಂತೆಕಟ್ಟೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಆಳವಡಿಸಿರುವ ಬುಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಸಂಚಾರ ಠಾಣೆ ಉಪನಿರೀಕ್ಷಕ ಅಬ್ದುಲ್ ಖಾದರ್ ತಿಳಿಸಿದ್ದಾರೆ