ಜಿಲ್ಲೆ

ಕರೊನಾ ಕಟ್ಟಿಹಾಕಲು ದಂಡ, ಜಿಲ್ಲೆಯಲ್ಲಿ ಖಾಕಿ ಪಡೆ ಅಲರ್ಟ್

Bengaluru Rural

ಬೆಂಗಳೂರು ಗ್ರಾಮಾಂತರ: ಕರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಮೇಲೆ ದಂಡಾಸ ಪ್ರಯೋಗಿಸುತ್ತಿರುವ ಜಿಲ್ಲಾಡಳಿತ ಅ.1ರಿಂದ ಜಿಲ್ಲೆಯಾದ್ಯಂತ ಅಭಿಯಾನದ ಮಾದರಿಯಲ್ಲಿ ದಂಡ ವಿಧಿಸುವ ಕಾರ್ಯ ಚುರುಕುಗೊಳಿಸಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ಸನಿಹದಲ್ಲಿದೆ, ಮೃತಪಟ್ಟವರ ಸಂಖ್ಯೆ ಶತಕದ ಅಂಚಿನಲ್ಲಿದೆ. ಇಂಥ ಪರಿಸ್ಥಿತಿಯಲ್ಲೂ ಸಾರ್ವಜನಿಕರು ಮುಂಜಾಗ್ರತೆ ನಿರ್ಲಕ್ಷಿಸುತ್ತಿರುವುದು ಹೆಚ್ಚಾಗಿದೆ.

ಲಾಕ್‌ಡೌನ್ ತೆರವು ಬಳಿಕ ಜಿಲ್ಲೆಯಲ್ಲಿ ಪರಸ್ಪರ ಅಂತರ ಕಾಪಾಡುವುದು, ಅನಗತ್ಯ ಓಡಾಟ, ಮಾಸ್ಕ್ ಧರಿಸದಿರುವುದು ಸೇರಿ ವಿನಾಕಾರಣ ಗುಂಪುಗೂಡುವ ಸನ್ನಿವೇಶ ಸಾಮಾನ್ಯ ಎನ್ನುವಂತಾಗಿದೆ. ಇದರ ನಡುವೆ ಜಿಲ್ಲಾಡಳಿತ ಕರೊನಾ ನಿಯಮ ಉಲ್ಲಂಘನೆ ವಿರುದ್ಧ ದಂಡಾಸ ಪ್ರಯೋಗಿಸುವ ನಿಟ್ಟಿನಲ್ಲಿ ತುಸು ಮೃದುಧೋರಣೆ ತಾಳಿತ್ತು. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೆ ಜಿಲ್ಲೆಯಾದ್ಯಂತ ಕಠಿಣ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ ದಂಡಾಸ ಪ್ರಯೋಗ ಚುರುಕುಗೊಳಿಸಿದೆ.

ಬ್ಯಾರಿಕೇಡ್ ಅಳವಡಿಕೆ: ಮುಖ್ಯರಸ್ತೆಗಳಲ್ಲಿ, ಪೊಲೀಸ್ ಠಾಣೆ ಸಮೀಪ, ಜಿಲ್ಲೆಯ ಆಯಕಟ್ಟಿನ ಜಾಗಗಳಲ್ಲಿ ಬ್ಯಾರಿಕೇಡ್ ಅಳವಡಿಸಿರುವ ಪೊಲೀಸರು ಸಾರ್ವಜನಿಕರ ಮೇಲೆ ನಿಗಾವಹಿಸುತ್ತಿದ್ದಾರೆ, ಮಾಸ್ಕ್ ಧರಿಸದೆ ಓಡಾಡುವುದು, ಐದಕ್ಕಿಂತ ಹೆಚ್ಚಿನ ಜನ ಸೇರುವುದು, ಪರಸ್ಪರ ಅಂತರ ಕಾಪಾಡಿಕೊಳ್ಳದಿರುವುದು ಕಂಡು ಬಂದರೆ ಸ್ಥಳದಲ್ಲೇ ದಂಡ ವಸೂಲಿಗೆ ಮುಂದಾಗಿದ್ದಾರೆ.

ಅನುಚಿತ ವರ್ತನೆಗೆ ಎ್ಐಆರ್: ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ತಿಕ್ಕಾಟ, ವಾಗ್ವಾದ ನಡೆಯುತ್ತಿರುವ ಪ್ರಸಂಗಗಳು ಹೆಚ್ಚುತ್ತಿವೆ. ದಂಡ ವಿಧಿಸಲು ಮುಂದಾದ ಅಧಿಕಾರಿಗಳು, ಪೊಲೀಸರ ವಿರುದ್ಧ ಸಾರ್ವಜನಿಕರು ಹರಿಹಾಯುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ ಸಾರ್ವಜನಿಕರ ಅನುಚಿತ ವರ್ತನೆಗೆ ಎ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ.

ಆಗಸ್ಟ್‌ನಲ್ಲಿ 2 ಲಕ್ಷ ರೂ. ದಂಡ ವಸೂಲಿ: ಆಗಸ್ಟ್‌ನಲ್ಲಿ ದಂಡಾಸ ಪ್ರಯೋಗಿಸಿದ ಜಿಲ್ಲಾಡಳಿತ ಮಾಸ್ಕ್ ಧರಿಸದ, ಪರಸ್ಪರ ಅಂತರ ಕಾಪಾಡದ ಜನರಿಗೆ ದಂಡದ ರುಚಿ ತೋರಿಸಿತ್ತು, ತಿಂಗಳಲ್ಲೇ 2,097 ಮಂದಿಯಿಂದ 2.09.700 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿತ್ತು.

9756 ಸೋಂಕಿತರು: ಜಿಲ್ಲೆಗೆ ಸಂಬಂಧಿಸಿದಂತೆ ಇದುವರೆಗೆ 9,756 ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 739 ಅನ್ಯರಾಜ್ಯ ಹಾಗೂ ಹೊರಜಿಲ್ಲೆಯ ಪ್ರಕರಣಗಳಾಗಿವೆ. 9,017 ಜಿಲ್ಲೆಯ ನಿವಾಸಿಗಳಾಗಿದ್ದಾರೆ. 9,756 ಪ್ರಕರಣಗಳ ಪೈಕಿ 7,888 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 1,772 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರೆಲ್ಲರ ಆರೋಗ್ಯ ಸ್ಥಿರವಾಗಿದೆ. ಕರೊನಾ ಸೋಂಕಿನಿಂದ 96 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯ ನಾಲ್ಕೂ ತಾಲೂಕುಗಳ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಿಗಾವಹಿಸಲಿದ್ದು, ಮುಲಾಜಿಲ್ಲದೆ ದಂಡ ವಿಧಿಸಲು ಸೂಚನೆ ನೀಡಲಾಗಿದೆ. ಸಾರ್ವಜನಿಕರು ಮಾರ್ಗಸೂಚಿ ಪಾಲಿಸಬೇಕು. ರವಿ ಡಿ.ಚನ್ನಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲಾಡಳಿತದಿಂದ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಕೆಲವರು ಕರೊನಾ ಮಾರ್ಗಸೂಚಿ ಉಲ್ಲಂಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆ, ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ದಂಡ ವಿಧಿಸುವ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ರವಾನಿಸುವಂತೆ ಸೂಚಿಸಲಾಗಿದೆ. ಡಾ.ಜಗದೀಶ್ ಕೆ.ನಾಯಕ್, ಅಪರ ಜಿಲ್ಲಾಧಿಕಾರಿ