ಉಡುಪಿಯ ಯಕ್ಷಗಾನ ಕಲಾರಂಗದ ನೂತನ ಕಟ್ಟಡದಲ್ಲಿ ನಡೆಯುತ್ತಿರುವ ಸನಿವಾಸ ಶಿಬಿರಕ್ಕೆ ಭೇಟಿ ನೀಡಿದ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪ್ರವೀಣ ವಿ. ಗುಡಿ ಅವರಿಗೆ ಫಲ ಮಂತ್ರಾಕ್ಷತೆ ನೀಡಿದರು. ಎಸ್​.ವಿ. ಭಟ್​, ನಾರಾಯಣ ಎಂ. ಹೆಗಡೆ, ಎಚ್​.ಎನ್​. ಶೃಂಗೇಶ್ವರ, ಮುರಳಿ ಕಡೆಕಾರ್​ ಇದ್ದರು. 
ಜಿಲ್ಲೆ

ಕಲಾವಿದರಿಗೆ ಆಸರೆಯಾದ ಉಡುಪಿಯ ಯಕ್ಷಗಾನ ಕಲಾರಂಗ

ಪೇಜಾವರ ವಿಶ್ವಪ್ರಸನ್ನ ಶ್ರೀ ಮೆಚ್ಚುಗೆ | ವಿದ್ಯಾಪೋಷಕ್​ ಸನಿವಾಸ ಶಿಬಿರಕ್ಕೆ ಭೇಟಿ

ವಿಜಯವಾಣಿ ಸುದ್ದಿಜಾಲ ಉಡುಪಿ
ಯಕ್ಷಗಾನ ಕಲಾವಿದರ ಬದುಕಿಗೆ ಉಡುಪಿಯ ಯಕ್ಷಗಾನ ಕಲಾರಂಗ ದೊಡ್ಡ ಆಸರೆಯಾಗಿದೆ. ಅನೇಕ ಕಲಾವಿದರು ಬದುಕಿನಲ್ಲಿ ನೆಮ್ಮದಿ ಹಾಗೂ ಸಮಾಜದಲ್ಲಿ ಗೌರವವನ್ನೂ ಕಂಡಿದ್ದಾರೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿದರು.

ಉಡುಪಿಯ ಯಕ್ಷಗಾನ ಕಲಾರಂಗದ ನೂತನ ಕಟ್ಟಡದಲ್ಲಿ ವಿದ್ಯಾಪೋಷಕ್​ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಸನಿವಾಸ ಶಿಬಿರ ವೀಕ್ಷಣೆಗಾಗಿ ಶನಿವಾರ ರಾತ್ರಿ ಭೇಟಿ ಕೊಟ್ಟು ಮಾತನಾಡಿದ ಶ್ರೀಗಳು, ಕಲಾರಂಗ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ವಿದ್ಯಾರಂಗಕ್ಕೂ ದಾಪುಗಾಲಿಟ್ಟಿರುವುದು ಮಾದರಿಯಾಗಿದೆ ಎಂದರು.

ತಾವುಗಳು ಬೆಳೆಯಿರಿ, ಬೆಳಗಿರಿ

ವಿದ್ಯಾಪೋಷಕ್​ ಯೋಜನೆ ಮೂಲಕ ಬಡ ಮಕ್ಕಳಿಗೆ ಕಲಾರಂಗ ನೆರವು ನೀಡುತ್ತಿದೆ. ಮನೆಯನ್ನೂ ಕಟ್ಟಿಸಿಕೊಡುವಂತಹ ಮಹತ್ಕಾರ್ಯ ಮಾಡುತ್ತಿದೆ. ನಿಮ್ಮ ಬದುಕು ಬಂಗಾರವಾದಾಗ ಅವರ ಶ್ರಮ ಸಾರ್ಥಕವಾಗುತ್ತದೆ. ಅನೇಕರ ಸಹಾಯಹಸ್ತವನ್ನು ನಿಮಗೆ ಹಸ್ತಾಂತರಿಸಿದ್ದು, ವಿದ್ಯಾರ್ಥಿಗಳಾದ ತಾವುಗಳು ಸರಿಯಾಗಿ ಕಲಿತು ಬೆಳೆಯಬೇಕು, ಬೆಳಗಬೇಕು. ಕಿಂಚಿತ್ತೂ ಸಹ ಸಮಯ ಹಾಗೂ ಶ್ರಮ ವ್ಯರ್ಥ ಮಾಡಬಾರದು ಎಂದು ಶಿಬಿರಾರ್ಥಿಗಳಿಗೆ ಶ್ರೀಗಳು ಕಿವಿಮಾತು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ಎಸ್​.ವಿ. ಭಟ್​, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್​.ಎನ್​. ಶೃಂಗೇಶ್ವರ, ಕಾರ್ಯದರ್ಶಿ ಮುರಳಿ ಕಡೆಕಾರ್​, ಶಿಬಿರದ ನಿರ್ದೇಶಕ ಪ್ರವೀಣ ವಿ. ಗುಡಿ ಇತರರಿದ್ದರು.