ಉಡುಪಿ: ತಮಿಳು ನೆಲ, ತಮಿಳು ಭಾಷೆ, ಸಂಸ್ಕೃತಿಯಲ್ಲಿ ರಾಮಾಯಣ ಅದರ ಸಂದೇಶ ಹಾಗೂ ಮೌಲ್ಯಗಳು ಸಮೃದ್ಧವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿದೆ.
ತಮಿಳು ಜನತೆ ಆಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಕೈಜೋಡಿಸಬೇಕು ಎಂದು ಆಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣದ ವಿಶ್ವಸ್ಥ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದರು.
ಚೆನ್ನೈನಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ತಮಿಳು ಭಾಷೆಯಲ್ಲಿಯೇ ಮಾತನಾಡಿದ ಅವರು, ತಮಿಳು ನೆಲದಲ್ಲಿ ಕಂಬ ರಾಮಾಯಣದಂಥ ಸಾಹಿತ್ಯ ಕೃತಿಗಳು, ಭರತನಾಟ್ಯದಂತಹ ಶಿಷ್ಟ ಕಲೆ ಹಾಗೂ ಇಲ್ಲಿನ ಜನಪದೀಯ ಸಂಸ್ಕೃತಿಯಲ್ಲೂ ರಾಮಾಯಣದ ಹೆಗ್ಗುರುತು ಸಮೃದ್ಧವಾಗಿ ಕಾಣಿಸುತ್ತಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ ಧನಿಷ್ಕೋಟಿ, ರಾಮಸೇತು, ರಾಮೇಶ್ವರದಂತಹ ಪವಿತ್ರ ಸ್ಥಳಗಳು ತಮಿಳು ನೆಲದಲ್ಲೇ ಇರುವುದಂತೂ ರಾಮಾಯಣದೊಂದಿಗೆ ತಮಿಳಿನ ನಂಟಿಗೆ ಶ್ರೇಷ್ಠ ಸಾಕ್ಷಿಗಳಾಗಿವೆ ಎಂದರು.
ಪ್ರಸ್ತುತ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತು ಪ್ರಾರಂಭಿಕ ಪ್ರಕ್ರಿಯೆಗಳು ನಡೆಯುತ್ತಿವೆ. ತಮಿಳುನಾಡು ರಾಜ್ಯದ ಜನತೆ ಈ ಕಾರ್ಯದಲ್ಲಿ ನಮ್ಮೊಂದಿಗೆ ಇರಬೇಕು ಎಂದು ವಿಶೇಷವಾಗಿ ಅಪೇಕ್ಷಿಸುವುದಾಗಿ ಹೇಳಿದರು.