ಹೊದ್ದೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಭಗವತಿ ದೇವಸ್ಥಾನದಲ್ಲಿ ಬುಧವಾರ ಪೀಠ, ಬಿಂಬ, ಕಲಶ ಪ್ರತಿಷ್ಠೆಯ ಕಾರ್ಯಕ್ರಮ ನೆರವೇರಿತು.  
ಜಿಲ್ಲೆ

ಶ್ರೀ ಭಗವತಿ ದೇವಸ್ಥಾನದಲ್ಲಿ ಪೀಠ, ಬಿಂಬ ಪ್ರತಿಷ್ಠೆ ಸಂಪನ್ನ

ನಾಪೋಕ್ಲು: ಸಮೀಪದ ಹೊದ್ದೂರು ಗ್ರಾಮದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣಗೊಂಡ ಶ್ರೀ ಭಗವತಿ ದೇವಸ್ಥಾನದಲ್ಲಿ ಭುವಾರ ಪೀಠ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ ಅದ್ಧೂರಿಯಿಂದ ನೆರವೇರಿತು.


ಮರಕಡ ಶ್ರೀ ಗುರುಪರಾಶಕ್ತಿ ಮಠದ ನರೇಂದ್ರನಾಥ ಯೋಗೇಶ್ವರ ಸ್ವಾಮೀಜಿ ಅನುಗ್ರಹ, ನಿತಿನ್ ನರೇಂದ್ರನಾಥ ಯೋಗೇಶ್ವರ ಸ್ವಾಮಿ ಮತ್ತು ಮಾತೆ ಶಕುಂತಲಾ ಅಮ್ಮನವರ ನೇತೃತ್ವದಲ್ಲಿ ದೇಗುಲ ಜೀರ್ಣೋದ್ಧಾರ ಗೊಂಡಿದ್ದು, ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಳಶೋತ್ಸವ ಮಾ.7ರಿಂದ ಪ್ರಾರಂಭವಾಗಿದೆ.
ಬುಧವಾರ ಬೆಳಗ್ಗೆ ಪೀಠ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ, ನಾಗ ಪ್ರತಿಷ್ಠೆ, ಬ್ರಹ್ಮ ಕಲಶ ಪೂಜೆ, ಸಂಜೆ ಆದಿವಾಸ ಹೋಮ, ದೀಪಾರಾಧನೆ, ಮಹಾಬಲಿ ಪೀಠ, ಅದಿವಾಸ, ತ್ರಿಕಾಲ ಪೂಜೆ, ಕಲಶಾದಿ ವಾಸ ಮತ್ತಿತರ ಧಾರ್ಮಿಕ ಕಾರ್ಯಕ್ರಮ ರುಗಿದವು. ಬ್ರಹ್ಮ ಶ್ರೀ ಕೆ.ಯು ಪದ್ಮನಾಭ ತಂತ್ರಿಗಳು ಮತ್ತು ಬಳಗ, ದೇವಾಲಯದ ಮುಖ್ಯ ಅರ್ಚಕ ಶ್ರೀಕಾಂತ್ ಪೂಜಾ ವಿಧಿ-ವಿಧಾನ ನೆರವೇರಿಸಿದರು. ಗುರುವಾರ ಬೆಳಗ್ಗೆ ಗಣಪತಿ ಹೋಮ ಮಹಾಬಲಿ, ಪೀಠ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮಹಾಪೂಜೆ, ದೇವರ ನೃತ್ಯಬಲಿ ಜರುಗಲಿದೆ.


ಅರಮೇರಿ ಕಳಂಚೇರಿ ಮಠದ ಸ್ವಾಮೀಜಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚೌರಿರ ಕೆ. ಮೇದಪ್ಪ, ದೇವತಕ್ಕ ನೆರವಂಡ ಸಂಜಯ್ ಪೂಣಚ್ಚ, ಸಮಿತಿ ಸದಸ್ಯ ಚೌರಿರ ಉದಯ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ದೇಗುಲ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.