ಜಿಲ್ಲೆ

14ರಂದು ಪುತ್ತಿಗೆ ಶ್ರೀಗಳ ಪೀಠಾರೋಹಣ ಸುವರ್ಣ ಸಂಭ್ರಮ

ಉಡುಪಿ: ಪಯಾರ್ಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಸಂನ್ಯಾಸ ಜೀವನಕ್ಕೆ 2024ರ ಏಪ್ರಿಲ್​ ತಿಂಗಳು 50 ವಸಂತಗಳನ್ನು ಪೂರೈಸಿದ ಸುವರ್ಣ ಸಂಭ್ರಮದ ವರ್ಷವಾಗಿದೆ.
1974ರ ಏಪ್ರಿಲ್​ 8ರಂದು 12ನೇ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿ ಪೀಠಾಧಿಪತಿಗಳಾದ, ಪ್ರಸಕ್ತ ಶ್ರೀ ಕೃಷ್ಣಮಠದ ಪರ್ಯಾಯ ಸ್ವಾಮಿಗಳಾದ ಪುತ್ತಿಗೆ ಮಠದ ಶ್ರೀಗಳ ಈ ವಿಶೇಷ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಿಲು ಶ್ರೀಗಳ ಶಿಷ್ಯ ಹಾಗೂ ಅಭಿಮಾನಿ ಬಳಗವು ನಿರ್ಧರಿಸಿದೆ.

  • ವಿವಿಧ ಕಾರ್ಯಕ್ರಮ:
    ಏ.14ರ ಸೌರಮಾನ ಯುಗಾದಿಯಂದು ವಿಶೇಷ ಕಾರ್ಯಕ್ರಮಗಳ ಮೂಲಕ ಗೌರವಾರ್ಪಣೆಗೆ ನಿಶ್ಚಯಿಸಿದೆ. ಅಂದು ಸಾಯಂಕಾಲ 5ಕ್ಕೆ ಶ್ರೀಗಳನ್ನು ಮೆರವಣಿಗೆ ಮೂಲಕ ರಾಜಾಂಗಣಕ್ಕೆ ಕರೆತಂದು, ಶ್ರೀಗಳ ಮೂಲಕ ಶ್ರೀಕೃಷ್ಣನಿಗೆ ಸುವರ್ಣ ನಾಣ್ಯಗಳಿಂದ ಅಭಿಷೇಕ ಮತ್ತು ಸಂಜೆ 4ಗಂಟೆಯಿಂದ 7ರ ವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
  • ಗಣ್ಯರ ಉಪಸ್ಥಿತಿ:
    ಮಾಹೆ ಸಹಕುಲಾಧಿಪತಿ ಮತ್ತು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಎಚ್​.ಎಸ್​. ಬಲ್ಲಾಳ್​, ಎಲ್​ಐಸಿ ಹಿರಿಯ ವಿಭಾಗೀಯ ವ್ಯವಸ್ಥಾಪಕ ರಾಜೇಶ್​ ಮುಧೋಳ್​, ಯುಪಿಸಿಎಲ್​ ಉಡುಪಿ ಪ್ರಾದೇಶಿಕ ನಿರ್ದೇಶಕ ಕಿಶೋರ್​ ಆಳ್ವ, ಕರಾವಳಿ ಗ್ರೂಪ್​ ಆ್​ ಕಾಲೇಜ್​ನ ನಿರ್ದೇಶಕ ಗಣೇಶ್​ ರಾವ್​, ಉಡುಪಿ ನಂದಿಕೂರಿನ ಪ್ರಾಜ್​ ಇಂಡಸ್ಟ್ರೀಸ್​ನ ಅಶೋಕ್​ ಶೆಟ್ಟಿ, ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಂಜ ಶ್ರೀಧರ ತಂತ್ರಿ, ಬ್ರಹ್ಮಾವರ ರೋಟರಿಯ ನಿಯೋಜಿತ ಗವರ್ನರ್​ ಬಿ.ಎಂ. ಭಟ್​ ಮತ್ತು ಆಕ್ಸಿಸ್​ ಬ್ಯಾಂಕ್​ನ ಉಪಾಧ್ಯಕ್ಷ ಸುರೇಶ್​ ರಾವ್​, ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನದ ಪ್ರಕಾಶ್​ಚಂದ್ರ ಶೆಟ್ಟಿ ಮುಂತಾದ ಅನೇಕ ಗಣ್ಯರ ಉಪಸ್ಥಿತಿಯಲ್ಲಿ 108 ಚಿನ್ನದ ನಾಣ್ಯಗಳ ಸಮರ್ಪಣೆ ಹಾಗೂ ಶ್ರೀಗಳಿಗೆ ಪುಷ್ಪಾರ್ಚನೆ ಹಮ್ಮಿಕೊಳ್ಳಲಾಗಿದೆ.
  • ಶ್ರೀಗಳಿಂದ ಸಂದೇಶ:
    ಸೌರಮಾನ ಯುಗಾದಿಯ ನೂತನ ಕ್ರೋಧಿ ಸಂವತ್ಸರದ ಕುರಿತು ಸುಗುಣೇಂದ್ರ ಶ್ರೀಗಳು ಶುಭ ಸಂದೇಶ ನೀಡಲಿದ್ದಾರೆ. ಶ್ರೀಕೃಷ್ಣನ ಭಕ್ತರು ಹಾಗೂ ಶ್ರೀಗಳ ಅಭಿಮಾನಿಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಹಾಗೂ ಮಾಹಿತಿಗಾಗಿ ಮೊ.ಸಂ. 7676215242, 9880835626 ಸಂಪರ್ಕಿಸಬಹುದು ಎಂದು ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.
  • ಕೃಷ್ಣನಿಗೆ 18 ಕೋಟಿ ರೂ. ಮೌಲ್ಯದ ಸ್ವರ್ಣ ರಥ
    ಪುತ್ತಿಗೆ ಸುಗುಣೇಂದ್ರ ಶ್ರೀಗಳ ಸುವರ್ಣ ಸಂನ್ಯಾಸದ ವಿಶೇಷ ಸಂದರ್ಭವನ್ನು ಸ್ಮರಣೀಯವಾಗಿಸಲು ಹಾಗೂ ಚತುರ್ಥ ಪರ್ಯಾಯದ ಸಂಕಲ್ಪವಾದ ವಿಶ್ವಗಿತಾ ಪರ್ಯಾಯದ ಶ್ವವ್ಯಾಪಿ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದ ಸ್ಮರಣಾರ್ಥ ಶ್ರೀಗಳು ಉಡುಪಿ ಶ್ರೀಕೃಷ್ಣನಿಗೆ ಅಪೂರ್ವ ಕೊಡುಗೆ ನೀಡಲು ಯೋಜಿಸಿದ್ದಾರೆ. ಸುಮಾರು 18 ಕೋಟಿ ರೂ. ವೆಚ್ಚದಲ್ಲಿ 'ಪಾರ್ಥಸಾರಥಿ' ಎಂಬ ಹೆಸರಿನಲ್ಲಿ ಚಿನ್ನದ ರಥ ಸಮರ್ಪಿಸಲು ಸಿದ್ಧತೆ ನಡೆಸಿದ್ದಾರೆ. ಈ ಯೋಜನೆಯ ಪ್ರಾರಂಭಕ್ಕೆ ಮುಹೂರ್ತ ನಡೆಸಲಾಗುವುದು.