ಜಿಲ್ಲೆ

ಪೀಣ್ಯ ವಿಶೇಷ ಹೂಡಿಕೆ ವಲಯ: ರಾಜ್ಯ ಸರ್ಕಾರದಿಂದ ಅಧಿಸೂಚನೆ

ಬೆಂಗಳೂರು: ಏಷ್ಯಾದ ಅತಿದೊಡ್ಡ ಕೈಗಾರಿಕೆ ಪ್ರದೇಶವೆಂದು ಖ್ಯಾತಿ ಪಡೆದಿರುವ ಪೀಣ್ಯ ಇಂಡಸ್ಟ್ರೀಯಲ್ ಎಸ್ಟೇಟ್ ಅನ್ನು ‘ವಿಶೇಷ ಹೂಡಿಕೆ ವಲಯ’ ಆಗಿ ಮಾನ್ಯತೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ವಿಶೇಷ ಹೂಡಿಕೆ ವಲಯ ವ್ಯಾಪ್ತಿಗೆ ಪೀಣ್ಯ 1, 2, 3 ಹಾಗೂ 4ನೇ ಹಂತದ ಕೈಗಾರಿಕೆ ಪ್ರದೇಶವು ಒಳಪಡಲಿದೆ. ಲಗ್ಗೆರೆ, ಪೀಣ್ಯ, ಚೊಕ್ಕಸಂದ್ರ, ನೆಲಗೆದರನಹಳ್ಳಿಗೆ ಸೇರಿದ ವಿವಿಧ ಸರ್ವೆ ಸಂಖ್ಯೆಗಳನ್ನು ಹೊಂದಿರುವಂತೆ ಒಟ್ಟು 1,416.46 ಎಕರೆ ಪ್ರದೇಶವು ಒಳಪಟ್ಟಿರುತ್ತದೆ. ಈ ಪ್ರದೇಶಕ್ಕೆ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯನ್ನು ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರವನ್ನಾಗಿ ನೇಮಿಸಲಾಗಿದೆ. ಜತೆಗೆ ರಾಜ್ಯ ಸರ್ಕಾರ ಕೂಡ ತನ್ನ ಅಧಿಕಾರವನ್ನು ಇಂಡಸ್ಟ್ರೀಯಲ್ ಟೌನ್‌ಶಿಪ್​​​ ಅಥಾರಿಟಿ (ಐಟಿಎ) ಮೂಲಕ ಚಲಾಯಿಸಲು ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ನಿಯಮ 29ರ ಉಪನಿಯಮ 2 ಹಾಗೂ 3ನ್ನು ಬಳಸಿಕೊಳ್ಳಬಹುದಾಗಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕಾಸಿಯಾ ಸ್ವಾಗತ:

ಪೀಣ್ಯ ವಿಶೇಷ ಹೂಡಿಕೆ ವಲಯವನ್ನಾಗಿ ಘೋಷಿಸಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಕಾಸಿಯಾ ಸ್ವಾಗತಿಸಿದೆ. ಪೀಣ್ಯ ಕೈಗಾರಿಕೋದ್ಯಮಿಗಳ ಬಹುದಿನಗಳ ಕನಸನ್ನು ನನಸು ಮಾಡಿರುವ ಸಿಎಂ ಸಿದ್ದರಾಮಯ್ಯ ಅವರ ಕ್ರಮ ಶ್ಲಾಘನೀಯ. ಸಂಘ ಹಾಗೂ ಕೈಗಾರಿಕೋದ್ಯಮಿಗಳ ಪರವಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ತಿಳಿಸಿದ್ದಾರೆ.