ಜಿಲ್ಲೆ

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಪಾದಚಾರಿ ಸಾವು

ಮಾದೇಶ್ ತಿ.ನರಸೀಪುರ

ತಿ.ನರಸೀಪುರ: ತಾಲೂಕಿನ ಆಲಗೂಡು ಸಮೀಪದ ದಮ್ಮಯ್ಯನ ಬೋರೆ ಬಳಿ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಪಾದಚಾರಿ ಸೋಮವಾರ ಸಾವಿಗೀಡಾಗಿದ್ದಾರೆ.


ಆಲಗೂಡು ಗ್ರಾಮದ ಮಹದೇವಸ್ವಾಮಿ(ಸತೀಶ್-46) ಮೃತಪಟ್ಟವರು.


ದಮ್ಮಯ್ಯನ ಬೋರೆ ಬಳಿ ತಮ್ಮ ಜಮೀನಿಗೆ ತೆರಳಿ ಗ್ರಾಮದ ಕಡೆಗೆ ಬರುತ್ತಿದ್ದಾಗ ಕೊಳ್ಳೇಗಾಲ ಕಡೆಯಿಂದ ಅತಿ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಾಯಗೊಂಡಿದ್ದ ಅವರನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸುವಾಗ ಮೃತಪಟ್ಟರು.


ಮೃತರ ಸಂಬಂಧಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಾಯುವಿಹಾರಕ್ಕೆ ತೆರಳಿದ್ದ ಯುವಕ ದುರ್ಮರಣ: ತಿ.ನರಸೀಪುರ: ತಾಲೂಕಿನ ನಾಗಲಗೆರೆ ಸಮೀಪ ಅಪರಿಚಿತ ವಾಹನ ಡಿಕ್ಕಿಯಾಗಿ ಯುವಕ ಸೋಮವಾರ ಮೃತಪಟ್ಟಿದ್ದಾರೆ.


ತಾಲೂಕಿನ ಬೂದಹಳ್ಳಿ ಗ್ರಾಮದ ಎಸ್.ಮನೋಜ್(26) ಸಾವಿಗೀಡಾದ ಯುವಕ. ತಿ.ನರಸೀಪುರ-ಮಂಡ್ಯ ಮುಖ್ಯ ರಸ್ತೆಯ ನಾಗಲಗೆರೆ ಸಮೀಪ ಸೋಮವಾರ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.