crime scene tape focus on word 'crime' in cenematic dark tone with copy space 
ಜಿಲ್ಲೆ

ಉಚ್ಚಿಲ ಪೇಟೆಯಲ್ಲಿ ಕಾರು ಡಿಕ್ಕಿಯಾಗಿ ಪಾದಚಾರಿ ಸಾವು

Udupi

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಪೇಟೆಯಲ್ಲಿ ಮಂಗಳವಾರ ಕಾರು ಡಿಕ್ಕಿಯಾಗಿ ಪಾದಚಾರಿ, ನಿಟ್ಟೆಯ ಸುಧಾಕರ ಶೆಟ್ಟಿ (52) ಮೃತಪಟ್ಟಿದ್ದಾರೆ.

ಕುಂದಾಪುರದಿಂದ ಮಂಗಳೂರಿನತ್ತ ಚಲಿಸುತ್ತಿದ್ದ ಕಾರು, ನರ್ಸರಿಯಲ್ಲಿ ಸಸಿ ಖರೀದಿಸಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಉಚ್ಚಿಲ ಪೇಟೆಯತ್ತ ಸಾಗುತ್ತಿದ್ದ ಸುಧಾಕರ ಶೆಟ್ಟಿ ಅವರಿಗೆ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಚ್ಚಿಲ ಪೇಟೆ ಸಮೀಪ ಸೋಮವಾರವಷ್ಟೇ ಲಾರಿ ಡಿಕ್ಕಿಯಾಗಿ ಸ್ಕೂಟಿ ಸವಾರರೊಬ್ಬರು ಮೃತಪಟ್ಟಿದ್ದರು. ಈ ಪ್ರದೇಶಗಳಲ್ಲಿ ನಿರಂತರವಾಗಿ ಅಪಘಾತ ನಡೆಯುತ್ತಿದ್ದು, ಅಸಮರ್ಪಕ ಸರ್ವೀಸ್ ರಸ್ತೆ, ಉಚ್ಚಿಲ -ಪಣಿಯೂರು ತಿರುವಿಗೆ ಅಳವಡಿಸಿದ್ದ ಬ್ಯಾರಿಕೇಡ್ ಹಾಗೂ ಎಲ್ಲೆಂದರಲ್ಲಿ ಹಾಕಿರುವ ಅಭಿನಂದನಾ ಫ್ಲೆಕ್ಸ್‌ಗಳು ಸಂಚಾರಕ್ಕೆ ತೊಡಕಾಗುತ್ತಿವೆ. ಪೊಲೀಸರು ಹಾಗೂ ಹೆದ್ದಾರಿ ಇಲಾಖೆ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.