ಚಿಕ್ಕಬಳ್ಳಾಪುರ: ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಜಿಲ್ಲೆಯ ಮಾರುಕಟ್ಟೆಗೆ ಅವರೆಕಾಯಿ ಆವಕ ಕಡಿಮೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ಪನ್ನದ ಗುಣಮಟ್ಟವೂ ಇಳಿಕೆಯಾಗಿ ವ್ಯಾಪಾರಿಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಮುಂಗಾರು ಅವಧಿಯಲ್ಲಿ ನಿರೀಕ್ಷೆಗೆ ಅನುಗುಣವಾಗಿ ಮಳೆ ಬೀಳಲಿಲ್ಲ. ಇದರಿಂದ ಬಿತ್ತನೆ ಪ್ರಮಾಣ ಕುಸಿದಿತ್ತು. ಹಾಗೆಯೇ ಹಿಂಗಾರು ಅವಧಿಯಲ್ಲಿ ೆಂಗಲ್ ಚಂಡಮಾರುತ ಪ್ರಭಾವ ಬೀರಿದ್ದು ಒಳ್ಳೆಯ ಇಳುವರಿ ಸಿಕ್ಕಿಲ್ಲ. ಇದರಿಂದ ಹೊರ ಜಿಲ್ಲೆಯ ಮಾರುಕಟ್ಟೆಗೆ ಅವರೆಕಾಯಿ ಪೂರೈಕೆಯಾಗುತ್ತಿದೆ.
ಕೆಜಿಗೆ 50 ರೂ.
ಪ್ರಸ್ತುತ 1 ಕೆ.ಜಿ. ಅವರೆಕಾಯಿ 40-50 ರೂ.ಗಳಿಗೆ ಮಾರಾಟವಾಗುತ್ತಿದೆ. ಮಕರ ಸಂಕ್ರಾಂತಿ ಹಬ್ಬದವರೆಗೂ ಒಳ್ಳೆಯ ಬೇಡಿಕೆ ಇರುತ್ತದೆ. ಇದರಿಂದ ಮುಂಬರುವ ದಿನಗಳಲ್ಲಿ ಕೆಜಿಗೆ 70ರಿಂದ 80ರೂ.ವರೆಗೆ ಏರಿಕೆಯಾಗುವ ನಿರೀಕ್ಷೆ ಇದೆ. ಈಗ ರಸ್ತೆಬದಿಗಳಲ್ಲಿ ಮೂಟೆಗಟ್ಟಲೇ ಅವರೆಕಾಯಿ ಇಟ್ಟು ವ್ಯಾಪಾರಸ್ಥರು ವಹಿವಾಟಿನಲ್ಲಿ ತೊಡಗಿದ್ದಾರೆ.
ಮನೆಗಳಲ್ಲಿ ಘಮಘಮ
ಸಾಮಾನ್ಯವಾಗಿ ಚಳಿಗಾಲದ ಡಿಸೆಂಬರ್‌ನಿಂದ ಅವರೆಕಾಯಿ ಸೇವನೆಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಅದರಂತೆ ಜಿಲ್ಲೆಯ ಬಹುತೇಕ ಮನೆಗಳಲ್ಲಿ ಆವರೆಕಾಯಿ ಘಮಘಮ ಮೂಗಿಗೆ ಬಡಿಯುತ್ತಿದೆ. ಬಾಯಲ್ಲಿ ನೀರೂರಿಸುವ ಅವರೆ ಪಲ್ಯ, ಇಡ್ಲಿ, ದೋಸೆ, ಹಿತುಕಿದ ಕಾಳಿನ ಸಾರು, ಅವರೆ ರಾಗಿ ಗಂಜಿ, ಅವರೆ ಪಲಾವ್, ಅವರೆ ಕಾಳು ಸೇರಿ ತರಹೇವಾರಿ ತಿನಿಸುಗಳನ್ನು ತಯಾರಿಸಿ ಸವಿಯಲಾಗುತ್ತಿದೆ.
ಹವಾಮಾನದ ವೈಪರೀತ್ಯದ ಹಿನ್ನೆಲೆಯಲ್ಲಿ ಗುಣಮಟ್ಟದ ಅವರೆಕಾಯಿ ಪೂರೈಕೆ ಪ್ರಮಾಣ ಕುಸಿದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ದರವೂ ಕಡಿಮೆ ಇದೆ.
- ರಾಘವೇಂದ್ರ ವ್ಯಾಪಾರಿ, ಚಿಕ್ಕಬಳ್ಳಾಪುರ