ಶಿರಹಟ್ಟಿ: ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ಸರ್ವಜ್ಞ ನಿಜಕ್ಕೂ ಜ್ಞಾನಾನುಭವದ ಮೇರು ಶಿಖರ ಎಂದು ಫಕೀರೇಶ್ವರ ಮಠದ ಉತ್ತರಾಧಿಕಾರಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕು ಶಸಾಪ ಮತ್ತು ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಪಟ್ಟಣದ ಶ್ರೀ ಫಕೀರೇಶ್ವರ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಶ್ರಾವಣ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅತ್ಯಂತ ಸರಳ, ಸಾತ್ವಿಕ ಹಾಗೂ ಜ್ಞಾನ ಭಂಡಾರದ ಸಮಾಜ ಜೀವಿಯಾಗಿದ್ದ ಸರ್ವಜ್ಞನವರು ಮೂರು ಸಾಲಿನಲ್ಲಿ ಮೂರು ಲೋಕ ಒಪ್ಪುವಂತೆ, ಪ್ರಾಸವನ್ನೇ ಪ್ರಧಾನವಾಗಿಟ್ಟುಕೊಂಡು ಪ್ರತಿಯೊಬ್ಬರ ಮನಮುಟ್ಟುವಂತೆ ಪ್ರಪಂಚಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರು ಜಾನಪದ ಚಕ್ರವರ್ತಿ ಎಂದು ಗುರುತಿಸಿಕೊಂಡಿದ್ದು ಹೆಮ್ಮೆಯ ಸಂಗತಿ. ಆತನ ಮಾರ್ಗವನ್ನೇ ಅನುಸರಿಸಿದ ಅನೇಕ ಸಾಹಿತಿಗಳು ಕನ್ನಡದಲ್ಲಿ ತ್ರಿಪದ ರಚಿಸಿ ಜನಪ್ರಿಯತೆ ಪಡೆದಿದ್ದಾರೆ ಎಂದರು.
ಸರ್ವಜ್ಞನ ವಚನಗಳ ಕುರಿತು ರೇಣುಕಾ ಜಗಂಡಬಾವಿ ಉಪನ್ಯಾಸ ನೀಡಿ, ಅಪಾರ ಪಾಂಡಿತ್ಯ ಹೊಂದಿದ್ದ ಸರ್ವಜ್ಞ ತ್ರಿಕಾಲ ಜ್ಞಾನಿಯಂದೇ ಕರೆಸಿಕೊಂಡರು. ಸರ್ವಜ್ಞ ಸಾಮಾನ್ಯರಲ್ಲಿ ಅಸಾಮಾನ್ಯ ವ್ಯಕ್ತಿ, ಕನ್ನಡ ಸಾಹಿತ್ಯ ಲೋಕದ ದಿವ್ಯ ಶಕ್ತಿಯಾಗಿ ತೋರಿದ ವೈಚಾರಿಕ ಪ್ರಜ್ಞೆ ಹಾಗೂ ಆತನ ವಚನಗಳು ಸಾರ್ವಕಾಲಿಕ ಸತ್ಯವಾಗಿವೆ ಎಂದರು.
ನೇತೃತ್ವ ವಹಿಸಿದ್ದ ಶಾಂತಗಂಗಾಧರ ಶ್ರೀಗಳು ಮಾತನಾಡಿ, ಸ್ವಾರ್ಥ ಕೇಂದ್ರೀಕೃತವಾಗುತ್ತಿರುವ ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಮಾನವತ್ವ ಬೆಳಗಲು ಬಸವತತ್ವದ ಹಣತೆ ಪ್ರಜ್ವಲಿಸಬೇಕಾಗಿದೆ. ಸರ್ವಜ್ಞ ಆದಿಯಾಗಿ ಶರಣರ ವಚನಗಳಿಗೆ ವ್ಯಾಖ್ಯಾನ ನೀಡಲಾಗದು. ಅವು ಬದುಕಿನ ದಾರಿಗಳಾಗಿದ್ದು ಸಮಾಜವನ್ನು ಸನ್ಮಾರ್ಗದಲ್ಲಿ ಒಯ್ಯುವಂಥ ವಚನ ಖನಿಜಗಳನ್ನು ನೇಪಥ್ಯಕ್ಕೆ ಸರಿಸುತ್ತಿರುವುದು ಸರಿಯಲ್ಲ ಎಂದರು.
ಶಸಾಪ ತಾಲೂಕು ಅಧ್ಯಕ್ಷ ಕೆ.ಎ. ಬಳಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕದಳಿ ಮಹಿಳಾ ವೇದಿಕೆ ತಾಲೂಕು ಅಧ್ಯಕ್ಷೆ ನಂದಾ ಕಪ್ಪತ್ತನವರ, ಎಚ್.ಎಂ. ದೇವಗಿರಿ, ಬಿ.ಎಸ್. ಹಿರೇಮಠ, ಸಿ.ಪಿ. ಕಾಳಗಿ, ಸಂಗನಬಸವ ದೇವರು, ಷಡಕ್ಷರಯ್ಯ ಹಿರೇಮಠ, ಮಧುಮತಿ ಮಹಾರಾಜಪೇಟ್, ಶಾಂತಾ ಪಾಟೀಲ, ಬಸವರಾಜ ಬೋರಶೆಟ್ಟರ ಇತರರಿದ್ದರು. ಶಿಕ್ಷಕ ಎಚ್.ಎಂ. ಪಲ್ಲೇದ ಕಾರ್ಯಕ್ರಮ ನಿರ್ವಹಿಸಿದರು.