ಪುತ್ತೂರು: ದಾರಿಯಲ್ಲಿ ಅಸ್ವಸ್ಥವಾಗಿ ಬಿದ್ದು ನರಳುತ್ತಿದ್ದ ನವಿಲೊಂದನ್ನು ಸಹೋದರರು ಆರೈಕೆ ಮಾಡಿ ಬಳಿಕ ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ವೇಣೂರಿನ ಕುಕ್ಕೇಡಿ ನಿವಾಸಿ ಸಂಜೀವ ಪೂಜಾರಿ ಎಂಬುವರ ಪುತ್ರರಾದ ಸಂಪತ್ ಅಂಚನ್ ಮತ್ತು ಸಂತೋಷ್ ಅಂಚನ್ ಮಾದರಿಯಾದ ಯುವಕರು. ಗೆಜ್ಜೆಗಿರಿ ದೇವಸ್ಥಾನದಲ್ಲಿ ಜಾತ್ರೋತ್ಸವ ನಡೆಯುತ್ತಿದ್ದು, ಅಲ್ಲಿಗೆ ಭಾನುವಾರ ಈ ಸಹೋದರರು ಆಗಮಿಸಿ ಹಿಂದಿರುಗುತ್ತಿದ್ದ ವೇಳೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಅಸ್ವಸ್ಥಗೊಂಡು ರಸ್ತೆಯ ಬದಿಯಲ್ಲಿ ಒದ್ದಾಡುತ್ತಿದ್ದ ನವಿಲನ್ನು ಗಮನಿಸಿದ್ದರು. ತಕ್ಷಣವೇ ತಮ್ಮ ವಾಹನ ನಿಲ್ಲಿಸಿ ಅದನ್ನು ಆರೈಕೆ ಮಾಡಿ ಬಳಿಕ ಪುತ್ತೂರು ನಗರ ಪೊಲೀಸ್‌ಠಾಣೆಗೆ ಒಪ್ಪಿಸಿದರು.
ಠಾಣೆಯ ಜಯರಾಮ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಅವರ ಸೂಚನೆಯಂತೆ ನಗರದ ಬಿರುಮಲೆ ಗುಡ್ಡೆಯಲ್ಲಿರುವ ಸಾಲು ಮರದ ತಿಮ್ಮಕ್ಕ ಪಾರ್ಕ್‌ಗೆ ನವಿಲನ್ನು ಹಸ್ತಾಂತರಿಸಿದರು.