ಜಿಲ್ಲೆ

ನಿಯಮ ಪಾಲನೆಯೊಂದಿಗೆ ಹಬ್ಬ ಆಚರಿಸಿ

Davangere - Desk - Ganesh M K

ಹರಿಹರ: ಕಾನೂನು ನಿಯಮಗಳನ್ನು ಪಾಲಿಸಿ ಹಬ್ಬಗಳನ್ನು ಆಚರಿಸುವವರಿಗೆ ಪೊಲೀಸ್ ಇಲಾಖೆ ಸದಾಕಾಲ ಸಹಕಾರ ನೀಡುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ನಗರದ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಸಂಜೆ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಆಚರಣೆ ಸಲುವಾಗಿ ನಡೆದ ಶಾಂತಿ ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾನೂನಾತ್ಮಕವಾಗಿ ಆಚರಿಸುವ ಗಣೇಶೋತ್ಸವಗಳಿಗೆ ಪೊಲೀಸ್ ಇಲಾಖೆ ಅಗತ್ಯ ಸಹಕಾರ ನೀಡುತ್ತದೆ ಎಂದರು.

ಸಾರ್ವಜನಿಕ ವಿನಾಯಕ ಸಮಿತಿಯವರು, ಪೆಂಡಾಲ್ ಬಳಿ ಸಿಸಿ ಕ್ಯಾಮರಾ ಅಳವಡಿಸಬೇಕು. ವಿಸರ್ಜನೆ ಮಾಡುವ ದಿನ ಸಾಧ್ಯವಾದಷ್ಟು ಹೆಚ್ಚಿನ ಸ್ವಯಂ ಸೇವಕರನ್ನು ನೇಮಿಸುವ ಮೂಲಕ ಪೊಲೀಸರಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಬಂಟಿಂಗ್ಸ್, ಬ್ಯಾನರ್ ಕಟ್ಟಲು ಕಾನೂನಾತ್ಮಕವಾಗಿ ಅವಕಾಶವಿಲ್ಲ, ಆದರೂ ಇತರರಿಗೆ ತೊಂದರೆಯಾಗದಂತೆ ಇದೆಲ್ಲಾ ಮಾಡುವುದಾದರೆ ಸೀಮಿತವಾಗಿ ಅವಕಾಶ ಕೊಡಲಾಗುವುದು. ಅಧಿಕಾರಿಗಳೊಂದಿಗೆ ಚರ್ಚಿಸಿ ವಿವಿಧ ಪರವಾನಿಗೆಗಳಿಗೆ ಸಿಂಗಲ್ ವಿಂಡೋ ಸೌಕರ್ಯ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಮುಸ್ಲಿಂ ಬಾಂಧವರು ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಹಿಂದುಗಳಿಗೆ ತೊಂದರೆಯಾಗದಂತೆ, ಹಿಂದೂಗಳು ವಿನಾಯಕೋತ್ಸವ ಸಂದರ್ಭದಲ್ಲಿ ಮುಸ್ಲಿಂರಿಗೆ ತೊಂದರೆಯಾಗದಂತೆ ಆಚರಣೆ ಮಾಡಿದಾಗ ಎಲ್ಲವೂ ಸುಗಮ. ಆದ್ದರಿಂದ ಈ ನಿಟ್ಟಿನಲ್ಲಿ ಎಲ್ಲ ಸಂಘಟನೆಗಳು ಚಿಂತನೆ ನಡೆಸಿ ಮುಂದುವರಿಯಿರಿ ಎಂದು ತಿಳಿಸಿದರು.

ಡಿವೈಎಸ್‌ಪಿ ಬಿ.ಎಸ್. ಬಸವರಾಜ್ ಮಾತನಾಡಿ, ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಠ್ಠಾಪಿಸುವ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ಅನುಮತಿ ಪಡೆಯತಕ್ಕದ್ದು. ಕಾನೂನು ಪ್ರಕಾರ ಡಿಜೆಗೆ ಅನುಮತಿ ಇಲ್ಲ. ಆಚರಣೆ ಸಂದರ್ಭದಲ್ಲಿ ಏನೆ ಅಹಿತಕರ ಘಟನೆ ನಡೆದರೆ ಅಥವಾ ನಡೆಯುವ ಸಂಭವ ಕಂಡುಬಂದರೆ ತಕ್ಷಣ ಪೊಲೀಸರನ್ನು ಸಂಪರ್ಕಿಸಬೇಕು ಎಂದರು.

ಪೌರಾಯುಕ್ತ ಐ. ಬಸವರಾಜ್ ಮಾತನಾಡಿ, ಪ್ರತಿ ವರ್ಷದಂತೆ ಈ ವಷರ್ವೂ ಗಣೇಶೋತ್ಸವದ ಪರವಾನಿಗೆಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳಿರುವ ಸಿಂಗಲ್ ವಿಂಡೋ ವ್ಯವಸ್ಥೆ ಮಾಡಲಾಗುವುದು ಎಂದರು.

ಬೆಸ್ಕಾಂ ಎಇಇ ಸಿ. ನಾಗರಾಜ್ ನಾಯ್ಕ, ಅಗ್ನಿಶಾಮಕ ಅಧಿಕಾರಿಗಳು, ನಗರಸಭೆ ಸದಸ್ಯರು, ಪತ್ರಕರ್ತರು, ಸಂಘ-ಸಂಸ್ಥೆಗಳ ಮುಖಂಡರು, ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.