ಜಿಲ್ಲೆ

ಅಭಿವೃದ್ಧಿ, ಕಾನೂನು ಸುವ್ಯವಸ್ಥೆಗೆ ಆದ್ಯತೆ ದಿನೇಶ್ ಗುಂಡೂರಾವ್

ಮಂಗಳೂರು: ಸರ್ಕಾರದ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಆಗಬೇಕು. ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆಗೆ ನಮ್ಮ ಆದ್ಯತೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.


ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಭಾನುವಾರ ಜಿಲ್ಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಕಾನೂನು ಸುವ್ಯವಸ್ಥೆ ಸರಿಯಾಗಿದ್ದರೆ ಮಾತ್ರ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಹೊರಗಿನ ಜನರು ಇಲ್ಲಿ ಬಂಡವಾಳ ಹೂಡುತ್ತಾರೆ, ಅಧಿಕ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪರಿಸ್ಥಿತಿ ಪುನರಾವರ್ತನೆ ಆಗಬಾರದು. ಬೆಂಕಿ ಹಚ್ಚುವುದು ಸುಲಭ, ಆರಿಸುವುದು ಕಷ್ಟ. ಇಂತಹ ವಿಷಯಗಳಲ್ಲಿ ಜನಪ್ರತಿನಿಧಿಗಳು ಕೂಡ ಹೊಣೆಗಾರಿಕೆ ವಹಿಸಿಕೊಳ್ಳಬೇಕು. ಸಾಮರಸ್ಯ ಕಾಪಾಡುವುದು ಎಲ್ಲ ನಾಗರಿಕರ ಜವಾಬ್ದಾರಿ. ಕಾನೂನು ಸುವ್ಯವಸ್ಥೆ ಪಾಲನೆಗೆ ಸವಾಲಾಗುವ ಸಂದರ್ಭ ಪೊಲೀಸರು ಜಾತಿ, ಪಂಗಡ, ಧರ್ಮ ನೋಡದೆ ಕ್ರಮ ಕೈಗೊಳ್ಳಬೇಕು ಎಂದರು.


ಮಳೆಗಾಲಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಇವತ್ತು ಸಭೆ ಕರೆದಿದ್ದೇನೆ. ಮುಂದಿನ ವಾರ ಮತ್ತೆ ಜಿಲ್ಲೆಗೆ ಭೇಟಿ ನೀಡಿ ಸಭೆ ಮಾಡುತ್ತೇನೆ. ಪ್ರಕೃತಿ ವಿಕೋಪಗಳ ಸಮಸ್ಯೆ ಮಾಹಿತಿ ಪಡೆಯುತ್ತೇನೆ. ಅವಶ್ಯ ಆರ್ಥಿಕ ಸಂಪನ್ಮೂಲ, ಲಭ್ಯತೆ ಬಗ್ಗೆ ಚರ್ಚೆ ಮಾಡುತ್ತೇನೆ. ನಮ್ಮ ಯೋಜನೆಗಳ ಜಾರಿ ಬಗ್ಗೆಯೂ ಅವಲೋಕಿಸುತ್ತೇನೆ ಎಂದರು.


ಆರ್‌ಎಸ್‌ಎಸ್‌ಗೆ ಸರ್ಕಾರಿ ಭೂಮಿ ಪರಭಾರೆ ವಿಚಾರದಲ್ಲಿ ಅಭಿಪ್ರಾಯ ಮಂಡಿಸಿದ ಸಚಿವರು, ಯಾರಿಗೆ ಅಂಥ ಭೂಮಿ ಕೊಟ್ಟಿದ್ದರೂ ಕಂದಾಯ ಇಲಾಖೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದು ಎಂದರು.


ವಿಧಾನಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಮಾಜಿ ಸದಸ್ಯ ಐವನ್ ಡಿಸೋಜ, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೊ, ಪ್ರಮುಖರಾದ ಮಮತಾ ಗಟ್ಟಿ, ಬಿ.ಇಬ್ರಾಹಿಂ, ಆರ್.ಪದ್ಮರಾಜ್ ಮುಂತಾದವರು ಉಪಸ್ಥಿತರಿದ್ದರು.