ಮುಳಬಾಗಿಲು: ದೇವಾಲಯಗಳಿಗೆ ಭೇಟಿ ನೀಡುವುದರಿಂದ ಉತ್ತಮ ಸಂಸ್ಕಾರ ಭಕ್ತಿಭಾವ ಉಂಟಾಗುವುದರಿಂದ ಪ್ರತಿಯೊಬ್ಬ ಮನುಷ್ಯರಲ್ಲೂ ಶ್ರೇಷ್ಠತೆ ಪ್ರಜ್ವಲಿಸಲು ಸಾಧ್ಯವಾಗುತ್ತದೆ ಮತ್ತು ಭಗವಂತನ ಸ್ಮರಣೆಯಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ತಾಲೂಕಿನ ತಾಯಲೂರು ರಸ್ತೆಯ ಖಾದ್ರಿಪುರ ಸರ್ಕಲ್ನಲ್ಲಿರುವ ಶ್ರೀ ಶಾಂತಿಧಾಮ ಶ್ರೀ ಶನೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಸೋಮವಾರ ನೂತನವಾಗಿ ಪ್ರತಿಷ್ಠಾಪನೆ ಮಾಡಲಾದ ಶ್ರೀ ಪ್ರಸನ್ನ ಸೋಮೇಶ್ವರ ಸ್ವಾಮಿ, ಶ್ರೀ ಅಭಯ ಆಂಜನೇಯ ಸ್ವಾಮಿ ದೇವರ ಬಿಂಬ ಪ್ರತಿಷ್ಠಾಪನೆ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ದೇವಾಲಯಗಳನ್ನು ನಿರ್ಮಿಸುವುದರಲ್ಲಿ ಇರುವಷ್ಟು ಆಸಕ್ತಿ ನಿರ್ವಹಣೆಯಲ್ಲೂ ಇರಬೇಕು. ಪ್ರತಿದಿನ ದೇವರಿಗೆ ಪೂಜೆ ಪುನಸ್ಕಾರ ನೆರವೇರಿಸಬೇಕು. ಅಲ್ಲದೇ ದೇವಾಲಯಕ್ಕೆ ಒಂದಷ್ಟು ಆದಾಯ ಬರುವಂತಿರಬೇಕು. ಅದಕ್ಕೆ ಈ ದೇವಾಲಯಕ್ಕೆ ಕನಿಷ್ಠ 5 ಲಕ್ಷ ರೂ. ವಂತಿಗೆ ಸಂಗ್ರಹಣೆ ಮಾಡಿ ಇಲ್ಲಿರುವ ಎಲ್ಲ ಮುಖಂಡರು ಸ್ವಯಂ ಘೋಷಣೆ ಮಾಡಿದರೆ ನಾನು ಸಹ 1 ಲಕ್ಷ ರೂ. ವಂತಿಕೆಯನ್ನು ವೈಯಕ್ತಿಕವಾಗಿ ನೀಡುವೆ ಎಂದರು.
ದೇವಾಲಯದ ಅಭಿವೃದ್ಧಿಗೆ ಅನುದಾನ
ಅವನಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಹಾಲಿ ಜೆಡಿಎಸ್ ಮುಖಂಡ ಜಿ.ಆನಂದರೆಡ್ಡಿ 1 ಲಕ್ಷ ರೂ.ಗಳ ವಂತಿಕೆ ಪ್ರಕಟಿಸಿ, ಕೆ.ಎಚ್.ಮುನಿಯಪ್ಪ ಅವರಿಗೆ ಬೆಂಬಲ ಸೂಚಿಸಿಗಾಗ ಉಳಿದ ಮುಖಂಡರು 25 ಸಾವಿರದಿಂದ 5 ಸಾವಿರದವರೆಗೂ ವಂತಿಕೆ ಘೋಷಿಸಿದರು. 5 ಲಕ್ಷಕ್ಕೆ ಕಡಿಮೆಯಾದರೆ ಉಳಿದ ಹಣವನ್ನು ಆಪ್ತ ಮುಖಂಡ ಕೆ.ವಿ.ರಾಮಪ್ರಸಾದ ಶೆಟ್ಟರಿ ಅವರಿಗೆ ತುಂಬುವಂತೆ ಮುನಿಯಪ್ಪ ಸೂಚಿಸಿದರು. ಇನ್ನು ದೇವಾಲಯದ ಅಭಿವೃದ್ಧಿಗೆ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.
ರಾಜಕೀಯ ಬೇಡ
ದೇವಾಲಯದಲ್ಲಿ ರಾಜಕೀಯ ಬೇಡ. ಸದ್ಯಕ್ಕೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಬಂದಾಗ ಪಕ್ಷದ ರಾಜಕಾರಣ ಮಾಡೋಣ. ಈಗ ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ಬೇರೆಸುವುದು ಬೇಡ ಎಂಬ ಜಾಣ್ಮೆ ಉತ್ತರವನ್ನು ಸಚಿವರು ನೀಡಿದರು. ಡೇರಿ ಹಾಗೂ ಡಿಸಿಸಿ ಬ್ಯಾಂಕ್ ಸಹಕಾರ ಸಂಘಗಳ ಹಾಗೂ ಸ್ಥಳಿಯ ಚುನಾವಣೆಗಳಾಗಿದ್ದು, ಅವುಗಳು ರಾಜಕೀಯ ಪಕ್ಷಗಳ ಅಡಿಯಲ್ಲಿ ನಡೆಯುವುದಿಲ್ಲ. ಹೀಗಾಗಿ ಪಕ್ಷಗಳ ಮುಖಂಡರ ಪ್ರವೇಶದ ಅವಶ್ಯಕತೆ ಇರುವುದಿಲ್ಲ ಎಂದರು.
ಬೆಂಬಲ ಬೆಲೆಗೆ ನನ್ನದೂ ಬೆಂಬಲವಿದೆ
ನೆರೆಯ ಆಂಧ್ರಪ್ರದೇಶದಲ್ಲಿ ಮಾವಿಗೆ ಬೆಂಬಲ ಬೆಲೆ ನೀಡಿದಂತೆ ರಾಜ್ಯದಲ್ಲೂ ಟೊಮ್ಯಾಟೊಗೆ ಬೆಂಬಲ ನೀಡಿದರೆ ನನ್ನ ಬೆಂಬಲ ಇರುತ್ತದ. ಆದರೆ ಎಲ್ಲ ಬೆಳೆಗಳನ್ನು ಸಮನಾಗಿ ಬೆಳೆದು ಲಾಭ ಪಡೆಯಬೇಕೇ ಹೊರೆತು ಟೊಮ್ಯಾಟೊ ಒಂದೇ ಬೆಳೆಯನ್ನು ಹೆಕ್ಟೇರುಗಟ್ಟಲೇ ಬೆಳೆದು ನಷ್ಟ ಅನುಭವಿಸಬಾರದು ಎಂದು ಮುನಿಯಪ್ಪ ಸಲಹೆ ನೀಡಿದರು.
ಅವನಿ ಬ್ಲಾಕ್ ಕಿಸಾನ್ ಖೇತ್ ಕಾಂಗ್ರೆಸ್ ಅಧ್ಯಕ್ಷ ಪಿ.ಎಂ.ಸದಾಶಿವ, ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ಜಯದೇವ್, ಎಸ್ಸಿ ಅವನಿ ಬ್ಲಾಕ್ ಅಧ್ಯಕ್ಷ ಮಾರಪ್ಪ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಂ.ವೆಂಕಟರಾಮ ರೆಡ್ಡಿ, ಉಪಾಧ್ಯಕ್ಷ ಮಂಡಿಕಲ್ ಎಂ.ಎಸ್. ಮಂಜುನಾಥ್, ಬಲ್ಲ ಗ್ರಾಪಂ ಮಾಜಿ ಅಧ್ಯಕ್ಷ ತೊರಡಿ ಶಿವಣ್ಣ, ಯುವ ಕಾಂಗ್ರೆಸ್ ಲೋಕೇಶ್, ಕಗ್ಗನಹಳ್ಳಿ ಶ್ರೀನಿವಾಸ್, ಸುಕುಮಾರ್, ಅಶೋಕ್, ಅರ್ಚಕ ಪಿ.ಸುದರ್ಶನ ದೀಕ್ಷೀತ್, ಮಂಜುನಾಥ್, ಸಿ.ವಿ.ರಕ್ಷ, ಚೇತನ್ ಪಟೇಲ್ ಇದ್ದರು.