ಚಿಮ್ಮಡ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ದಾನೇಶ್ವರ ಶ್ರೀಗಳು ಮಾತನಾಡಿದರು. ಬಾವಲತ್ತಿಯ ವಿಜಯ ವೇದಾಂಗ ಶ್ರೀಗಳು, ರಾಮಣ್ಣ ಮುಗಳಖೋಡ, ಬಿ.ಎಸ್. ಪಾಟೀಲ, ಆರ್.ಎಂ. ಬಗನಾಳ, ಹರಳಯ್ಯ ಅಥಣಿ, ದುಂಡಪ್ಪಾ ಪಾಟೀಲ ಮತ್ತಿತರರಿದ್ದರು. 
ಜಿಲ್ಲೆ

ಸತ್ಸಂಗದಿಂದ ಮನಸ್ಸಿನ ನೆಮ್ಮದಿ ಸಾಧ್ಯ

ವಿನಯ ಆಶೋಕ ನಾಯ್ಕ

ಚಿಮ್ಮಡ: ಕಟ್ಟೆಯ ಮೇಲೆ ಕುಳಿತು ಇನ್ನೊಬ್ಬರ ಕುರಿತು ಮಾತನಾಡುತ್ತ ನಮ್ಮ ಘನತೆ, ಗೌರವಗಳನ್ನು ನಾವೇ ಹಾಳು ಮಾಡಿಕೊಳ್ಳುವುದಕ್ಕಿಂತ ದೇವರು ಮಹಾಪುರುಷರ ಕುರಿತ ಚರ್ಚೆಮಾಡಿದಲ್ಲಿ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ದಾನೇಶ್ವರ ಶ್ರೀಗಳು ಹೇಳಿದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರಿಗಳ ಸ್ವಾಗತ ಹಾಗೂ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಸಾಧು ಸಂತರು, ಮಹಾನ್ ಪುರುಷರ ಕುರಿತ ಚರ್ಚೆಯಿಂದ ಜ್ಞಾನವೃದ್ಧಿಯಾಗುತ್ತದೆ, ದೇಶಪ್ರೇಮ ಬೆಳೆಯುತ್ತದೆ ಹಾಗೂ ಮಕ್ಕಳಿಗೆ ದೇಶದ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ. ನಾವು ಯಾರಿಗೂ ಅನ್ಯಾಯ ಮಾಡಬಾರದು. ಜತೆಗೆ ಅನ್ಯಾಯ ಸಹಿಸಲೂಬಾರದು. ದೇಶದ ವಿಷಯ ಬಂದಾಗ ಒಗ್ಗಟ್ಟಾಗಿರಬೇಕು ಎಂದರು.

ಬಾವಲತ್ತಿಯ ವಿಜಯ ವೇದಾಂಗ ಶ್ರೀಗಳು ಮಾತನಾಡಿ, ಧರ್ಮದಲ್ಲಿ ಜೊಳ್ಳು ಪೊಳ್ಳು ಹೋಗಿ ಗಟ್ಟಿ ಕಾಳುಗಳು ಮಾತ್ರ ಉಳಿಯಲಿವೆ. ಶರಣ ಮಹಾತ್ಮರು ನಿಜ ಭಕ್ತರಲ್ಲಿ ಯಾವತ್ತೂ ನೆಲೆಸಿರುತ್ತಾರೆ ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಪೂಜಾರಿ ಬಂಡಿಗಣಿ ಮಠದ ಇತಿಹಾಸ, ಶ್ರೀಗಳ ಸಾರ್ವಜನಿಕ ಸೇವೆಗಳ ಕುರಿತು ವಿವರಿಸಿದರು.

ರಾಮಣ್ಣ ಮುಗಳಖೋಡ, ಬಿ.ಎಸ್. ಪಾಟೀಲ, ಆರ್.ಎಂ. ಬಗನಾಳ, ಹರಳಯ್ಯ ಅಥಣಿ, ದುಂಡಪ್ಪಾ ಪಾಟೀಲ ಮತ್ತಿತರರಿದ್ದರು.

ದಾನೇಶ್ವರ ಶ್ರೀಗಳನ್ನು ರಥದ ಮೇಲೆ ಸಕಲ ವಾದ್ಯ ವೃಂದಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಬೆಳಗಾವಿ ಜಿಲ್ಲೆಯ ರಾಯಬಾಗ, ರಬಕವಿ-ಬನಹಟ್ಟಿ ಸುತ್ತ ಮುತ್ತುಲಿನ ಗ್ರಾಮಗಳ ಸಾವಿರಾರು ಜನ ಭಕ್ತಾಧಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.