ಜಿಲ್ಲೆ

ಪ್ರವಚನ ಆಲಿಕೆಯಿಂದ ಮನಸಿಗೆ ಶಾಂತಿ

ಮುಳಗುಂದ: ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ಆಧ್ಯಾತ್ಮ ಪ್ರವಚನ, ಸತ್ಸಂಗಗಳು ತಲುಪಿ ಯಶಸ್ವಿಯಾಗುತ್ತಿವೆ. ಪ್ರವಚನ ಆಲಿಸಿ ಬದಲಾವಣೆ ಕಾಣಬೇಕು. ಅಂದಾಗ ಮಾತ್ರ ಪ್ರವಚನ ಆಲಿಸಿದ್ದು ಸಾರ್ಥಕವಾಗುತ್ತದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.

ಸಮೀಪದ ಹರ್ತಿ ಗ್ರಾಮದಲ್ಲಿ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಅವರಿಂದ ನಡೆಯಲಿರುವ ‘ವಚನ ದರ್ಶನ’ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರವಚನಕಾರ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಚಿಕ್ಯಾಗೋ ಪಟ್ಟಣದಲ್ಲಿ ವಿದೇಶದ ಜನರಿಗೆ ಆಧ್ಯಾತ್ಮದ ಬಗ್ಗೆ ತಿಳಿಸಿ ಕೊಟ್ಟ ಶ್ರೇಯಸ್ಸು ವಿವೇಕಾನಂದರಿಗೆ ಸಲ್ಲುತ್ತದೆ. ಮೊಬೈಲ್ ಗೀಳು ಬಿಟ್ಟು ಆಧ್ಯಾತ್ಮ, ಸತ್ಸಂಗಗಳ ಕಡೆ ಹೆಚ್ಚು ಗಮನ ಕೊಡಿ, ಪರಮಾತ್ಮನ ಸಾಕ್ಷಾತ್ಕರದ ಜತೆಗೆ ಮನಸು ಸಾಕ್ಷಾತ್ಕಾರಗೊಳಿಸಿಕೊಳ್ಳಿ ಎಂದರು.

ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ, ರಾಜೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ಮುಖಂಡರಾದ ವಿಜಯಕುಮಾರ ಗಡ್ಡಿ, ಡಿ.ಕೆ. ಲಕ್ಕಣ್ಣವರ ಇತರರು ಇದ್ದರು.

ಬಸವ ಬುತ್ತಿ ಬಸವಣ್ಣನವರ ವಚನ ಗ್ರಂಥಗಳ ಮೆರವಣಿಗೆಯು ಭಜನೆ, ಕರಡಿ ಮಜಲು ಮುಂತಾದ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.