ಜಿಲ್ಲೆ

ಶಾಂತಿ ಕಾಪಾಡಲು ಸಹಕರಿಸಿ

ಮುದಗಲ್: ಪಟ್ಟಣವು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಭಾವೈಕ್ಯಕ್ಕೆ ಹೆಸರಾಗಿದೆ. ಹಿಂದು-ಮುಸ್ಲಿಮರು ಎಲ್ಲ ಹಬ್ಬಗಳನ್ನು ಸಹೋದರತ್ವದೊಂದಿಗೆ ಆಚರಿಸಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮಸ್ಕಿ ಸಿಪಿಐ ಬಾಲಚಂದ್ರ ಲಕ್ಕಂ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಗುರುವಾರ ಮಾತನಾಡಿದರು. ವಾಡಿಕೆಯಂತೆ ನಾವು ಶಾಂತಿ ಸಭೆಗಳನ್ನು ಆಯೋಜಿಸತ್ತಾ ಬರುತ್ತಿದ್ದೇವೆ ಎಂದರು. ಡಿ.ಜೆ. ಬಳಕೆ, ಮೆರವಣಿಗೆ ಸಂದರ್ಭದಲ್ಲಿ ಅನುಸರಿಬೇಕಾದ ಶಿಸ್ತು ಕ್ರಮಗಳು, ಗಣೇಶ ಪ್ರತಿಷ್ಠಾಪನೆ ಮಂಡಳಿಯವರು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಪಿಎಸ್‌ಐ ವೆಂಕಟೇಶ ಮಾಡಗೇರಿ ಮಾತನಾಡಿ, ಮೆರವಣಿಗೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಜಾಗ್ರತೆ ವಹಿಸಬೇಕು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಿಸಿ ಕ್ಯಾಮರಾ ಅಳವಡಿಸುವುದಾಗಿ ತಿಳಿಸಿದರು. ಧರ್ಮಗುರು ಜಮೀರ್ ಅಹ್ಮದ್ ಖಾಜಿ ಮಾತನಾಡಿ, ಸಮುದಾಯದ ಹಿರಿಯರು ಯುವಕರಿಗೆ ಉತ್ತಮವಾಗಿ ಹಬ್ಬಗಳನ್ನು ಆಚರಣೆ ಮಾಡಲು ಪ್ರೇರಣೆ ನೀಡಬೇಕೆಂದು ಕೋರಿದರು. ಪುರಸಭೆ ಸದಸ್ಯ ಅಮೀರಬೇಗ್ ಉಸ್ತಾದ್, ಪ್ರಮುಖರಾದ ಗುರುಬಸ್ಸಪ್ಪ ಸಜ್ಜನ್, ತಮ್ಮಣ್ಣ ಗುತ್ತೇದಾರ, ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ ಇತರರಿದ್ದರು.