ಮಂಡ್ಯ: ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸೋಣ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮರಸ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಕಾನೂನಿನ ಚೌಕಟ್ಟಿನಲ್ಲಿ ಹಬ್ಬವನ್ನು ಆಚರಿಸಿ. ಗಣಪತಿ ಪ್ರತಿಷ್ಠಾಪಿಸಲು ಅನುಮತಿ ಕಡ್ಡಾಯ. ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವವರು ತಾಲೂಕು ಕಚೇರಿಯಲ್ಲಿ ತೆರೆಯಲಾಗುವ ಏಕಗವಾಕ್ಷಿ ಕೇಂದ್ರದಲ್ಲಿ ಮನವಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ ಎಂದರು.
ಅನುಮತಿ ಪಡೆಯುವ ಸಂದರ್ಭದಲ್ಲಿ ಗಣಪತಿ ಪ್ರತಿಷ್ಠಾಪಿಸುವ ದಿನಾಂಕ, ಅವಧಿ, ವಿಸರ್ಜನೆ ಮಾಡುವ ದಿನಾಂಕ ಮತ್ತು ಸ್ಥಳ, ಮೆರವಣಿಗೆಯ ರೂಟ್‌ಮ್ಯಾಪ್ ನಮೂದಿಸಬೇಕು. ಇದರಿಂದ ಪೊಲೀಸ್ ಬಂದೋಬಸ್ತ್, ಸಿ.ಸಿ ಕ್ಯಾಮೆರಾ ಅಳವಡಿಕೆ, ಬ್ಯಾರಿಕ್ಯಾಡಿಂಗ್, ಚೆಸ್ಕಾಂ ಹಾಗೂ ಅಗ್ನಿ ಶಾಮಕ ಇಲಾಖೆಯಿಂದ ಅಗತ್ಯ ಸಿದ್ಧತೆಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಬಹುದು. ಸ್ಥಳೀಯ ಮುಖಂಡರು ಒಂದೇ ಸ್ಥಳವನ್ನು ನಿಗದಿಪಡಿಸಿಕೊಂಡು ಗಣಪತಿ ವಿಸರ್ಜನೆ ಮಾಡಿದರೆ, ಜಿಲ್ಲಾಡಳಿತದಿಂದ ಬೇಕಿರುವ ಸಿದ್ಧತೆ ಹಾಗೂ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದು ಸುಲಭ. ಜಿಲ್ಲೆಯಲ್ಲಿ ಪಿಒಪಿ ಗಣಪತಿ ತಯಾರಿಸುವುದಿಲ್ಲ. ಆದರೆ ಹೊರಗಿನಿಂದ ತಂದು ಮಾರಾಟ ಮಾಡುತ್ತಾರೆ. ಸಾರ್ವಜನಿಕರು ಪಿಒಪಿ ಗಣಪತಿ ಖರೀದಿ ಮಾಡಬಾರದು. ಆಯೋಜಕರು ಸಹ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅನ್ನ ಸಂತರ್ಪಣೆ ಸಂದರ್ಭದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಸೆ.5ರಂದು ಈದ್ ಮಿಲಾದ್ ಹಬ್ಬ ಇರುವುದರಿಂದ ಅಂದು ಗಣಪತಿ ವಿಸರ್ಜನೆ ಮಾಡುವುದು ಬೇಡ. ಗಣಪತಿ ಹಬ್ಬದ ದಿನದಂದೇ ಪ್ರತಿಷ್ಠಾಪಿಸಿ, ಅದರ ಬದಲಾಗಿ ಬೇರೆ ದಿನ ಪ್ರತಿಷ್ಠಾಪಿಸುವುದು ಬೇಡ. ಗಣಪತಿ ವಿಸರ್ಜನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ನಿಗದಿಪಡಿಸುವ ರೂಟ್‌ಮ್ಯಾಪ್ ಅನುಸಾರ ಮೆರವಣಿಗೆ ಚಲಿಸಬೇಕು. ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಲಾಗುವುದು. ಕೋಮು ಗಲಭೆ ಉಂಟು ಮಾಡುವ ಕಿಡಿಗೇಡಿಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಸ್ಥಳೀಯರಿಗೆ ಕಿಡಿಗೇಡಿ ಹಾಗೂ ಸಂದೇಹಾತ್ಮಕ ಘಟನೆ ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ಮಾಹಿತಿ ನೀಡಿ. ಕೋಮು ಗಲಾಭೆ ಉಂಟು ಮಾಡುವ ಹಾಗೂ ಶಾಂತಿ ಕದಡುವ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದು ಹಾಗೂ ಸುಳ್ಳು ಸುದ್ದಿ ಹರಡುವವರ ಮೇಲೂ ಸಹ ಪೊಲೀಸ್ ತಂಡ ನಡುವೆ ನಿಗಾ ವಹಿಸುತ್ತಿದೆ. ಪ್ರಕರಣಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಪಂಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಪರಿಸರ ಮಾಲಿನ್ಯ ಉಂಟುಮಾಡದಂತೆ ಗಣಪತಿ ಹಬ್ಬ ಆಚರಿಸೋಣ. ಈ ಬಾರಿ ಪುಟ್ಟದಾದ ಜೇಡಿ ಮಣ್ಣು ಹಾಗೂ ನೈಸರ್ಗಿಕ ಬಣ್ಣ ಉಪಯೋಗಿಸಿ ತಯಾರಿಸಿದ ಗಣಪತಿಯನ್ನು ಪ್ರತಿಷ್ಠಾಪಿಸಿ. ಪಿಒಪಿ ಗಣಪತಿಯನ್ನು ಕೆರೆ ನೀರಿನಲ್ಲಿ ವಿಸರ್ಜನೆ ಮಾಡಿದರೆ ಕೆರೆ ನೀರು ಮಲಿನವಾಗಿ ಮುಂದಿನ ದುಷ್ಪರಿಣಾಮವನ್ನು ನಾವೇ ಎದುರಿಸಬೇಕಾಗುತ್ತದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ ಇತರರಿದ್ದರು.