ಸಕಲೇಶಪುರ ಮಿನಿವಿಧಾನಸೌಧದ ಆವರಣದಲ್ಲಿ ನಡೆದ ಸಂವಿಧಾನ ಪೀಠಿಕೆ ವಚನ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶೃತಿ ಮಾತನಾಡಿದರು. ಮೇಘನಾ, ಮಂಜುನಾಥ್, ಆನಂದಮೂರ್ತಿ ಇತರರು ಇದ್ದರು. 
ಜಿಲ್ಲೆ

ಸಂವಿಧಾನ ಆಶಯ ಪಾಲಿಸಿದರೆ ದೇಶದಲ್ಲಿ ಶಾಂತಿ

ಸಕಲೇಶಪುರ: ಸಂವಿಧಾನದ ಆಶಯವನ್ನು ಎಲ್ಲರೂ ಪಾಲಿಸಿದರೆ ದೇಶದಲ್ಲಿ ಶಾಂತಿ ನೆಲಸಲಿದೆ ಎಂದು ಉಪವಿಭಾಗಾಧಿಕಾರಿ ಶೃತಿ ಹೇಳಿದರು.

ಮಿನಿವಿಧಾನಸೌಧದ ಆವರಣದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಸಂವಿಧಾನ ಪೀಠಿಕೆ ಸಮೂಹಿಕ ವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನಲ್ಲೇ ಅತ್ಯುತ್ತಮ ಸಂವಿಧಾನ ಭಾರತ ದೇಶದ್ದಾಗಿದ್ದು, ಸಾರ್ವಜನಿಕವಾಗಿ ಸಂವಿಧಾನದ ಬಗ್ಗೆ ಅರಿವು ಹೊಂದುವ ಉದ್ದೇಶದಿಂದ ರಾಜ್ಯ ಸರ್ಕಾರ ಪೀಠಿಕೆ ಪ್ರತಿಜ್ಞೆ ದಿನಾಚರಣೆ ಹಮ್ಮಿಕೊಂಡಿದೆ. ಪೀಠಿಕೆ ಅರಿತರೆ ಇಡೀ ಸಂವಿಧಾನ ಅರಿವಾಗಲಿದೆ. ಪೀಠಿಕೆಯಲ್ಲಿ ಇಡೀ ಸಂವಿಧಾನದ ಸಾರ ಸೇರಿದ್ದು, ತಪ್ಪದೇ ಎಲ್ಲರೂ ಸಂವಿಧಾನದ ಬಗ್ಗೆ ಅರಿವು ಹೊಂದುವುದು ಅತಿಮುಖ್ಯ ಎಂದರು.

ಪಟ್ಟಣದ ಜೂನಿಯರ್ ಕಾಲೇಜಿನ ಪ್ರಾಚಾರ್ಯ ಮಂಜುನಾಥ್ ಮಾತನಾಡಿ, ಭಾರತ ಸಂವಿಧಾನದಲ್ಲಿ ಉತ್ತಮ ಅಂಶಗಳನ್ನು ಆಯ್ದುಕೊಳ್ಳಲಾಗಿದ್ದು, ಅಂದು ರಚಿಸಲಾಗಿರುವ ಸಂವಿಧಾನ ಇಂದಿಗೂ ಪ್ರಸ್ತುತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮೇಘನಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದಮೂರ್ತಿ, ಇಒ ರಾಮಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಾ ಗುರುಮೂರ್ತಿ, ತಾಪಂ ಸಹಾಯಕ ನಿರ್ದೇಶಕರಾದ ಆದಿತ್ಯಾ, ಹರೀಶ್ ಮುಂತಾದವರಿದ್ದರು.