ಮುಂಡಗೋಡ: ಬೀದಿ ನಾಯಿಗಳ ಕಾಟದಿಂದ ಕಂಗಾಲಾಗಿದ್ದ ಪಟ್ಟಣದ ಜನತೆಗೆ ಈಗ ತುಸು ನೆಮ್ಮದಿ ಲಭಿಸಿದೆ. ಪಟ್ಟಣ ಪಂಚಾಯಿತಿ ವತಿಯಿಂದ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಕಳೆದ ಎರಡು ದಿನಗಳಿಂದ ಆರಂಭಗೊಂಡಿದೆ.
ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಬೀದಿ ನಾಯಿಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ತೀವ್ರಗೊಂಡಿತ್ತು. ಶಾಲಾ ಮಕ್ಕಳು, ಸಾರ್ವಜನಿಕರು ಹಗಲು ಹೊತ್ತಿನಲ್ಲಿಯೂ ಕೆಲ ಓಣಿಗಳಲ್ಲಿ ಓಡಾಡಲು ಭಯಪಡುವಂಥ ಸ್ಥಿತಿ ನಿರ್ವಣವಾಗಿತ್ತು. ಈ ಕುರಿತಂತೆ ಪಟ್ಟಣ ಪಂಚಾಯಿತಿ ನಾಯಿ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳೂ ಕೇಳಿಬಂದಿದ್ದವು. ಪಟ್ಟಣದಲ್ಲಿ ಬೀದಿನಾಯಿಗಳ ಸಂತತಿ ದಿನೇದಿನೆ ಹೆಚ್ಚಾಗುತ್ತಿದ್ದು ಇದರಿಂದ ಕಾರು ಮತ್ತಿತರ ವಾಹನಗಳದಡಿ ಅಡಗಿ ಕುಳಿತುಕೊಳ್ಳುವ ನಾಯಿಗಳು ಏಕಾಏಕಿ ದಾಳಿ ನಡೆಸುತ್ತಿದ್ದವು. ಅಲ್ಲದೆ, ದ್ವಿಚಕ್ರ ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡುತ್ತಿದ್ದವು.
ಬೀದಿನಾಯಿಗಳು ಪಟ್ಟಣದ ಅಂಗನವಾಡಿಗಳು, ಸರ್ಕಾರಿ ಕಚೇರಿ, ಮಾದರಿ ಶಾಲೆ, ಗಾಂಧಿನಗರ ಕ್ರಾಸ್ ಹತ್ತಿರ, ಗೌಳಿ ಓಣಿ, ಅದರಲ್ಲಿಯೂ ಪಟ್ಟಣದಿಂದ ನ್ಯಾಸರ್ಗಿಗೆ ಹೋಗುವ ರಸ್ತೆಯ ಹತ್ತಿರವಂತೂ ಸಂಜೆ ವೇಳೆ 20 ರಿಂದ 25 ಬೀದಿನಾಯಿಗಳ ಹಿಂಡು ರಸ್ತೆಯ ಮೇಲೆ ಮಲಗುವುದರಿಂದ ಭಯದಲ್ಲಿಯೇ ಶಾಲಾ ಮಕ್ಕಳು, ಬೈಕ್ ಸಂಚರಿಸಬೇಕಾದ ಸ್ಥಿತಿ ಉಂಟಾಗಿತ್ತು. ಈ ಕುರಿತು ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿಯೂ ಪಪಂ ಸದಸ್ಯರು ಬೀದಿ ನಾಯಿಗಳ ಹಾವಳಿಗಳ ಬಗ್ಗೆ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಮೈಸೂರಿನ ಕೆ.ಆರ್.ಪೇಟೆಯ ನುರಿತ ನಾಯಿ ಹಿಡಿಯುವ ತಂಡ ಕಾರ್ಯಾಚರಣೆ ನಡೆಸಿತು.
ನಾಯಿ ಹಿಡಿಯುವವರ ಮೈಸೂರಿನ ನುರಿತ ತಂಡ ಕಾರ್ಯಾಚರಣೆ ಮಾಡುತ್ತಿದೆ. ಅವುಗಳನ್ನು ಹಿಡಿದು ಚುಚ್ಚು ಮದ್ದು ನೀಡಿ ಅರಣ್ಯಕ್ಕೆ ಬಿಡಲಾಗುವುದು. ಈವರೆಗೆ 156 ಬೀದಿ ನಾಯಿಗಳನ್ನು ಹಿಡಿಯಲಾಗಿದೆ. ಶುಕ್ರವಾರ ಸಹ ಕಾರ್ಯಾಚರಣೆ ನಡೆಸಲಾಗಿದೆ. ಚುಚ್ಚು ಮದ್ದು ನೀಡಲು ಕಾರಣ ನಾಯಿ ಯಾರಿಗಾದರೂ ಕಚ್ಚಿದರೆ ಏನು ಆಗುವುದಿಲ್ಲ. | ಚಂದ್ರಶೇಖರ ಬಿ., ಪಪಂ ಮುಖ್ಯಾಧಿಕಾರಿ