ಬೆಂಗಳೂರು: ಸಮಾಜದಲ್ಲಿರುವ ಪ್ರತಿಯೊಬ್ಬ ಮನುಷ್ಯನು ಮಹಾತ್ಮಾ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡಲ್ಲಿ ಶಾಂತಿ, ಸಹಬಾಳ್ವೆಯಿಂದ ಬದುಕು ನಡೆಸಲು ಸಾಧ್ಯವಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಕಂದಾಯ ನೌಕರರ ಸಂಘದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಗರ ಜಿಲ್ಲೆ ವಿಭಾಗದ ಸಂಯುಕ್ತಾಶ್ರಯದಲ್ಲಿ ಮಂಗಲವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯವರ 154ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿ. ಅವರ ಜೀವನವೇ ಒಂದು ಸಂದೇಶವಾಗಿದ್ದು, ಅವರ ಹೆಸರು ಭಾರತೀಯರ ಮನಸ್ಸಿನಲ್ಲಿ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಇಂದಿಗೂ ಅಚ್ಚಳಿಯದಂತೆ ಉಳಿದಿದೆ. ಅಹಿಂಸಾ ತತ್ವದೊಂದಿಗೆ ತಮ್ಮ ಇಡೀ ಜೀವನ ನಡೆಸಿದ ಗಾಂಧೀಜಿಯವರು ನಮಗೆ ಆದರ್ಶ ಎಂದ ಅವರು, ದೇಶ ಕಟ್ಟಲು ಯಾವುದೇ ಭಾಷೆ, ಧರ್ಮ ಬೇಕಾಗಿಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡರೆ ಸಾಕು ಎಂದು ಜಿಲ್ಲಾಧಿಕಾರಿಯವರು ಪ್ರತಿಪಾದಿಸಿದರು.
ಇದೇ ವೇಳೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಯವರು ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ನಗರ ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜ್ ಪಿ.ಎಸ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕಿ ಪಲ್ಲವಿ ಹೊನ್ನಾಪುರ ಹಾಗೂ ಇತರರಿದ್ದರು.
ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ:
ಈ ವರ್ಷ ಮಕ್ಕಳು ಹಾಗೂ ಯುವಜನರಲ್ಲಿ ಗಾಂಧಿ ತತ್ವಗಳ ಅರಿವು ಮೂಡಿಸಲು ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿದ್ದು, ರಾಜ್ಯಾದ್ಯಂತ ಸುಮಾರು 12 ಸಾವಿರ ಶಾಲಾ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 137 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಾಲಾ ಮಟ್ಟದ ಸ್ಪರ್ಧೆಯಲ್ಲಿ 35 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಪ್ರಥಮ ಬಹುಮಾನವನ್ನು ಸಹಕಾರನಗರದ ಗಾಡ್‌ವಿನ್ ಪಬ್ಲಿಕ್ ಶಾಲೆಯ ವಂದನಾ, ದ್ವಿತೀಯ ಬಹುಮಾನ ಕಾವಲ್ ಬೈರಸಂದ್ರದ ಸರ್ಕಾರಿ ಪ್ರೌಢಶಾಲೆಯ ಐಶ್ವರ್ಯ.ಎಸ್ ಹಾಗೂ ತೃತೀಯ ಬಹುಮಾನ ಶ್ರೀರಾಂಪುರದ ಲಿಟಲ್ ಫ್ಲವರ್ ಪ್ರೌಢಶಾಲೆಯ ರಿತೀಶ.ವಿ ಪಡೆದುಕೊಂಡರು.
ಪದವಿಪೂರ್ವ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ 58 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಪ್ರಥಮ ಬಹುಮಾನ ಎಚ್‌ಎಎಲ್ ರಸ್ತೆಯ ಸರ್ ಎಂ.ವಿಶ್ವೇಶ್ವರಯ್ಯ ಪದವಿಪೂರ್ವ ಕಾಲೇಜಿನ ಮೇಘನಾ. ಸಿ, ದ್ವಿತೀಯ ಬಹುಮಾನ ಆನೇಕಲ್ ತಾಲೂಕಿನ ಕಾವೇರಿ ಪದವಿಪೂರ್ವ ಕಾಲೇಜಿನ ಅಕ್ಷಯ ಎಂ ಹಾಗೂ ತೃತೀಯ ಬಹುಮಾನ ವಸಂತನಗರದ ಮೌಂಟ್ ಕಾರ್ಮೆಲ್ ಪದವಿ ಕಾಲೇಜಿನ ಶ್ರೇಯಾ ಸತೀಶ್ ಜೋರಾಪುರ್ ಪಡೆದುಕೊಂಡಿದ್ದಾರೆ.
ಪದವಿ ಹಾಗೂ ಸ್ನಾತಕೋತ್ತರ ಪದವಿ ಮಟ್ಟದ ಸ್ಪರ್ಧೆಯಲ್ಲಿ 44 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಮೊದಲ ಬಹುಮಾನ ಹೊಸೂರು ರಸ್ತೆಯ ಅಲ್ ಅಮೀನ್ ಕಾಲೇಜ್ ಆ್ ಎಜುಕೇಶನ್‌ನ ಯಾಸ್ಮೀನ್ ಖಾನುಮ್, ದ್ವಿತೀಯ ಬಹುಮಾನ ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿನ ಪಲ್ಲವಿ. ಎಂ.ಎಸ್ ಹಾಗೂ ತೃತೀಯ ಬಹುಮಾನ ಹೊಸೂರು ರಸ್ತೆಯ ಅಲ್ ಅಮೀನ್ ಕಾಲೇಜ್ ಆ್ ಎಜುಕೇಶನ್‌ನ ವೀಣಾ.ಪಿ ಗಳಿಸಿದ್ದಾರೆ.