ನರಗುಂದ: ಎಲ್ಲ ಧರ್ಮ ಗ್ರಂಥಗಳು ಶಾಂತಿ ಮತ್ತು ಸೌಹಾರ್ದ ಸಾರುತ್ತವೆ. ಧರ್ಮಗಳ ತಿರುಳು ತಿಳಿದು ಬದುಕುವವನೇ ನಿಜವಾದ ಮನುಷ್ಯ ಎಂದು ಭೈರನಹಟ್ಟಿಯ ಶಾಂತಲಿಂಗ ಶ್ರೀಗಳು ಹೇಳಿದರು.
ಪಟ್ಟಣದ ಅರ್ಭಾಣ ಬಡಾವಣೆಯ ಹಜರತ್ ಮೆಹಬೂಬ್‌ಸುಭಾನಿ ದರ್ಗಾದ ಉರುಸ್ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಸೌಹಾರ್ದ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಗೆ ಸರ್ವಧರ್ಮ ಗುರುಗಳ ಆಶೀರ್ವಾದವೂ ಕಾರಣ. ಜಾತಿ, ಧರ್ಮವನ್ನಾಧರಿಸಿ ಜನರ ಒಗ್ಗಟ್ಟನ್ನು ಒಡೆದಾಗ ದೇಶಕ್ಕೆ ಕಂಟಕ ಬರುತ್ತದೆ. ಸಮಾಜದ ಯಾರೊಬ್ಬರೂ ತಾರತಮ್ಯ ಮಾಡಬಾರದು. ಕೋಮುಸೌಹಾರ್ದ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಜನಾಬ್ ಅಕ್ಬರಬೇಗ ಮುಲ್ಲಾ ಮಾತನಾಡಿ, ಅತಿಯಾದ ಸ್ವಾರ್ಥ ಮತ್ತು ಮೋಹದಿಂದ ಕೋಮುಸೌಹಾರ್ದ ನಾಶವಾಗುತ್ತಿದೆ. ದ್ವೇಷದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲಿಯೂ ದೇವರಿದ್ದಾನೆ ಎಂದು ನಂಬಿದರೆ ಯಾರನ್ನೂ ದ್ವೇಷಿಸುವ ಪರಿಸ್ಥಿತಿ ಬರದು ಎಂದು ತಿಳಿಸಿದರು.
ಶಿವಪ್ಪ ಬೋಳಶೆಟ್ಟಿ, ಶರಣ ಬಾಬುಸಾಹೇಬ್ ಜಮಾದಾರ, ನಜೀರ ಸಕಲಿ, ಯಲ್ಲಪ್ಪ ಕೋರಿ, ಜಾವೀದ ಸಕಲಿ, ಜುಬೇರ ಸಕಲಿ, ಮಹಮ್ಮದ್ ನಾಯ್ಕರ, ಕಾಶೀಂಸಾಬ್ ಜಮಾದಾರ, ಬುಡ್ನೇಸಾಬ್ ತೆಗ್ಗಿನಮನಿ, ಮಾಬುಸಾಬ್ ಜಮಾದಾರ ಉಪಸ್ಥಿತರಿದ್ದರು. ಕುಂದಗೋಳ ತಾಲೂಕು ಹಲಕುರ್ಕಿ ಗ್ರಾಮದ ಜನಪದ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮಗಳು ಜರುಗಿದವು. ಉಮೇಶ ಬೋಳಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.