ಸಂತೋಷ ವೈದ್ಯ ಹುಬ್ಬಳ್ಳಿ
ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ಒಂದೂವರೆ ತಿಂಗಳು ಕಳೆಯುತ್ತಿದ್ದಂತೆ ಶಾಸಕರು ಹಾಗೂ ಸಚಿವರ ಆಪ್ತ ಸಹಾಯಕರಾಗಲು ಅಧಿಕಾರಿಗಳ ನಡುವೆ ಪೈಪೋಟಿ ಕಾಣಿಸಿಕೊಂಡಿದೆ.
ಈ ಪೈಪೋಟಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮುಂಚೂಣಿಯಲ್ಲಿದ್ದಾರೆ.
ಸಚಿವರ ಆಪ್ತ ಕಾರ್ಯದರ್ಶಿ ಹುದ್ದೆಗೆ ಕೆಎಎಸ್ ಅಥವಾ ಹಿರಿಯ ಶ್ರೇಣಿಯ ಅಧಿಕಾರಿಗಳು ಅರ್ಹತೆ ಹೊಂದಿರುತ್ತಾರೆ. ಶಾಸಕರ ಆಪ್ತ ಸಹಾಯಕ (ಪಿಎ)ರಾಗಲು ಹೆಚ್ಚು ಅವಕಾಶಗಳಿರುತ್ತದೆ.
ಇಬ್ಬರು ಆಪ್ತ ಸಹಾಯಕರಲ್ಲಿ ಒಬ್ಬರು ಅಧಿಕಾರಿ ವರ್ಗದವರು ಹಾಗೂ ಇನ್ನೊಬ್ಬರು ಸ್ಥಳೀಯ (ಪದವೀಧರರು) ನೇಮಕಾತಿ ಆಗಿರುತ್ತದೆ. ವಿಧಾನ ಪರಿಷತ್ ಸದಸ್ಯರಿಗೂ ಈ ಅವಕಾಶವಿದೆ. ಶಾಸಕರ ಸಂಖ್ಯೆ ಹೆಚ್ಚಿರುವುದರಿಂದ ಹಾಗೂ ಇದೀಗ ಹೊಸ ಸರ್ಕಾರ ರಚನೆಯಾಗಿರುವುದರಿಂದ ಆಪ್ತ ಸಹಾಯಕರಾಗಲು ಪೈಪೋಟಿ ಕಾಣಿಸಿಕೊಂಡಿದೆ.
ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆಯೆಂಬ ಕಾರಣಕ್ಕೆ ಆಪ್ತ ಸಹಾಯಕರನ್ನಾಗಿ ಮಾಡಿಕೊಳ್ಳಲು ಶಾಸಕರಿಗೆ ಪಿಡಿಒಗಳು ಮೊದಲ ಆಯ್ಕೆಯಾಗಿರುತ್ತದೆ. 4-5 ವರ್ಷಗಳ ಹಿಂದೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಈ ಅವಕಾಶವಿತ್ತು. ಆದರೆ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರನ್ನು ಬೇರೆ ಕೆಲಸಕ್ಕೆ ನಿಯೋಜಿಸುವ ಹಾಗಿಲ್ಲ.
ಎಲ್ಲ ಶಾಸಕರು ಪಿಡಿಒಗಳನ್ನು ಆಪ್ತ ಸಹಾಯಕರನ್ನಾಗಿ ನೇಮಿಸಿಕೊಳ್ಳುತ್ತಾರೆಂದೇನಿಲ್ಲ. ಹಿಂದಿನ ಅವಧಿಯಲ್ಲಿ ರಾಜ್ಯದಲ್ಲಿ 35 ಜನ ಪಿಡಿಒಗಳು ಶಾಸಕರ ಆಪ್ತ ಸಹಾಯಕರಾಗಿದ್ದರು.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿ.ಸಿ. ಮಂಜುನಾಥ, ಈಗ ಮಾಜಿಗಳಾಗಿರುವ ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರಗೆ ಮಾರುತಿ ಹಂಚಿನಮನಿ, ಕಾರವಾರ ಶಾಸಕಿ ರೂಪಾಲಿ ನಾಯ್ಕಗೆ ಕವನ ಕುಮಾರ, ಭಟ್ಕಳ ಶಾಸಕ ಸುನೀಲ ನಾಯ್ಕಗೆ ಉಲ್ಲಾಸ ನಾಯ್ಕ ಆಪ್ತ ಸಹಾಯಕರಾಗಿದ್ದರು. ಈ ಬಾರಿ ಪಿಡಿಒಗಳು ಹೆಚ್ಚಿನ ಸಂಖ್ಯೆಯಲ್ಲಿ ಆಪ್ತ ಸಹಾಯಕರಾಗುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ 15 ವರ್ಷಗಳ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯದರ್ಶಿಗಿಂತ ಮೇಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಸೃಷ್ಟಿಸಿತ್ತು.
ಹಿಂದೆಲ್ಲ ಶಾಸಕರು ಮತ್ತು ಸಚಿವರು ಅವರ ಕ್ಷೇತ್ರದ ಕಚೇರಿಯಲ್ಲಿ ಪಿ.ಎ. ಆಗಿ ಪ್ರಥಮ ಮತ್ತು ದ್ವಿತೀಯ ದರ್ಜೆಯ ಸಹಾಯಕರನ್ನು ಬೇರೆ ಬೇರೆ ಇಲಾಖೆಯಿಂದ ನಿಯೋಜನೆ ಮೇಲೆ ಪಡೆದುಕೊಳ್ಳುತ್ತಿದ್ದರು. ಆದರೆ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಡಿಒ ಗಳನ್ನು ನಿಯೋಜಿಸಿಕೊಳ್ಳುವ ಪರಿಪಾಠ ಆರಂಭಗೊಂಡಿತ್ತು.
ಪಿಡಿಒ ಗಳಿಗೆ ಸರ್ಕಾರದ ಹಲವು ಯೋಜನೆಗಳು ಹಾಗೂ ಆಡಳಿತದ ಬಗ್ಗೆ ಹೆಚ್ಚು ಅನುಭವ ಇರುತ್ತದೆ. ಹಿಂದಿನ ಸರ್ಕಾರದ ಅವಧಿಯಲ್ಲಿ 35 ಜನ ಪಿಡಿಒಗಳು ಶಾಸಕರ ಆಪ್ತ ಸಹಾಯಕರಾಗಿದ್ದರು. ಪಿಡಿಒಗಳನ್ನು ಪಿಎ ಗಳನ್ನಾಗಿ ನಿಯೋಜಿಸುವ ಪರಿಪಾಠ ಕೈ ಬಿಡುವ ಬಗ್ಗೆ ಸರ್ಕಾರದಿಂದ ಯಾವುದೇ ಮಾಹಿತಿ ಇಲ್ಲ. -ರಾಜೀವ ವಾರದ ಅಧ್ಯಕ್ಷ, ಕರ್ನಾಟಕ ರಾಜ್ಯ ಪಿಡಿಒ ಗಳ ಕ್ಷೇಮಾಭಿವೃದ್ಧಿ ಸಂಘ
600 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕೊರತೆ
ರಾಜ್ಯದಲ್ಲಿ 6,022 ಗ್ರಾಮ ಪಂಚಾಯಿತಿಗಳಿವೆ. ಸುಮಾರು 600ರಷ್ಟು ಪಿಡಿಒ ಹುದ್ದೆಗಳು ಖಾಲಿ ಇವೆ. ಹೀಗಿರುವಾಗ, ಪಿಡಿಒಗಳು ಶಾಸಕರಿಗೆ ಆಪ್ತ ಸಹಾಯಕರಾಗಿ ನಿಯೋಜನೆಗೊಂಡರೆ ಪಂಚಾಯತ್ ಕೆಲಸಗಳಿಗೆ ಹಿನ್ನಡೆಯಾಗುತ್ತವೆ ಎಂಬ ಅಭಿಪ್ರಾಯವಿದೆ. ಇದಲ್ಲದೇ ಗ್ರಾಮೀಣಾಭಿವೃದ್ಧಿ ಇಲಾಖೆ ಕೇಂದ್ರ ಕಚೇರಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳಲ್ಲಿಯೂ ಪಿಡಿಒಗಳು ನಿಯೋಜನೆ ಮೇಲೆ ಇದ್ದಾರೆ. ಇದರಿಂದ ಕೆಲವು ಪಿಡಿಒ ಗಳಿಗೆ ಎರಡೆರಡು ಪಂಚಾಯಿತಿಗಳ ಜವಾಬ್ದಾರಿ ನಿಭಾಯಿಸಬೇಕಾದ ಪರಿಸ್ಥಿತಿ ಇವೆ. ಹಿಂದಿನ ಸರ್ಕಾರದಲ್ಲಿ ಶಾಸಕರ ಆಪ್ತ ಸಹಾಯಕರಾಗಿದ್ದ ಪಿಡಿಒಗಳು ಮತ್ತೆ ಪಿಎ ಆಗಲು ಪೈಪೋಟಿ ನಡೆಸಿದ್ದಾರೆ. ಕೆಲವರು ಅನಧಿಕೃತವಾಗಿ ಮುಂದುವರಿದಿದ್ದಾರೆ. ಪಿಡಿಒಗಳನ್ನು ಪಿಎ ಗಳನ್ನಾಗಿ ನಿಯೋಜಿಸುವ ಪರಿಪಾಠ ಕೈ ಬಿಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.