ಇಂಡಿ ತಾಲೂಕಿನ ತಾ.ಪಂ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಪಂ ಸಿಇಒ ರಿಷಿ ಆನಂದ ಮಾತನಾಡಿದರು. ಅಧಿಕಾರಿಗಳಾದ ಡಾ.ವಿಜಯಕುಮಾರ ಅಜೂರ, ನಿಂಗಪ್ಪ ಗೋಠೆ ಇತರರಿದ್ದರು.  
ಜಿಲ್ಲೆ

ಪಿಡಿಒಗಳು ತೆರಿಗೆ ವಸೂಲಿಗೆ ಆದ್ಯತೆ ನೀಡಿ

ಇಂಡಿ: ಎಲ್ಲ ಪಿಡಿಒಗಳು ತಮ್ಮ ಜವಾಬ್ದಾರಿ ಅರಿತು ಈ ಬಾರಿ ತೆರಿಗೆ ವಸೂಲಿ ಮಾಡಬೇಕು ಎಂದು ಜಿಪಂ ಸಿಇಒ ರಿಷಿ ಆನಂದ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲೂಕಿನ ಪಂಚಾಯತ್ ರಾಜ್ ವಿಷಯಗಳು ಮತ್ತು ನರೇಗಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಶುಕ್ರವಾರ ಮಾತನಾಡಿದರು.

ವಸತಿ ಯೋಜನೆಯಡಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ನಿಮ್ಮ ಹಂತದಲ್ಲಿ ಪ್ರತಿ ತಿಂಗಳು ಮೊದಲನೇ ದಿನ ಗ್ರಾಮ ಸಭೆ ಮಾಡಿ ಪ್ರಗತಿ ಕುರಿತು ಚರ್ಚಿಸಬೇಕು. ವಸತಿ ಯೋಜನೆ 2024-25 ನೇ ಸಾಲಿನ ಪ್ರಧಾನಮಂತ್ರಿ ಆವಾಸ ಯೋಜನೆಯ ಗುರಿಯ ಶೇ.90 ರಷ್ಟು ಅನುಮೋದನೆ ಪಡೆದುಕೊಳ್ಳಬೇಕು. ಬಸವ ವಸತಿ ಯೋಜನೆ, ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಅನುಮೋದನೆಗೆ ಬಾಕಿ ಇರುವ ಕುರಿತು ವಿಶೇಷ ಅಭಿಯಾನ ಆಯೋಜಿಸಿ ವಿವಿಧ ಹಂತದಲ್ಲಿರುವ ಮನೆಗಳನ್ನು ಪೂರ್ಣಗೊಳಿಸಿ ಮಾಸಿಕ ಕಾರ್ಯಕ್ರಮ ಅನುಷ್ಠಾನ ಗುರಿ ಶೇ.60 ರಷ್ಟು ಪ್ರಗತಿ ಸಾಧಿಸಲು ಸೂಚಿಸಿದರು.

ಪ್ರಸಕ್ತ ಅರ್ಥಿಕ ವರ್ಷದಲ್ಲಿ ತಾಲೂಕಿನ ಗ್ರಾ.ಪಂ ಗಳ ತೆರಿಗೆ ಸಂಗ್ರಹದಲ್ಲಿ ತೀರ್ವ ಕುಂಠಿತವಾಗಿದೆ. ಆದ್ದರಿಂದ 2 ದಿನದಲ್ಲಿ ವಿಶೇಷ ಕರ ವಸೂಲಾತಿ ಅಭಿಯಾನ ಆಯೋಜಿಸಿ ಶೇ. 60 ರಷ್ಟು ಪ್ರಗತಿ ಮಾಡಬೇಕು. ಈ ತಿಂಗಳ ಅಂತ್ಯದಲ್ಲಿ ಕರ ವಸೂಲಾತಿ ಶೇ 100 ರಷ್ಟು ಸಾಸಲು ಸೂಚಿಸಿದರು.

2.0 ತಂತ್ರಾಶದಲ್ಲಿ ಹೊರಗೆ ಉಳಿದ ಎಲ್ಲ ಆಸ್ತಿಗಳ ವಿವರಗಳನ್ನು ಕಡ್ಡಾಯವಾಗಿ 2 ದಿನಗಳಲ್ಲಿ ನಮೂದಿಸಬೇಕು. ಇ ಹಾಜರಾತಿ ಕಡ್ಡಾಯವಾಗಿದೆ. ಗ್ರಾಪಂಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಗ್ರಂಥಾಲಯ ಮೇಲ್ವಿಚಾರಕರ ವೇತನ ಪಾವತಿಸಬೇಕು ಎಂದರು.

ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ತಾಲೂಕಿನ ಗ್ರಾಮ ವ್ಯಾಪ್ತಿಯಲ್ಲಿ ಶೌಚಗೃಹ ನಿರ್ಮಿಸಿಕೊಳ್ಳಲು ಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ನೀಡಲು ಸಕಾಲ ಅರ್ಜಿ ತಕ್ಷಣ ವಿಲೇವಾರಿ ಮಾಡಬೇಕು. ಉದ್ಯೋಗ ಖಾತರಿ ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಕಡ್ಡಾಯವಾಗಿ 100 ಮಾನವ ದಿನಗಳ ಕೆಲಸ ನೀಡಬೇಕು. ಅಂಗವಿಕಲರನ್ನು ಗುರುತಿಸಿ ನರೇಗಾ ಯೋಜನೆ ಸೌಲಭ್ಯ ನೀಡಲು, ನರೇಗಾದಲ್ಲಿ ಮಹಿಳೆ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಆದ್ಯತೆ ನೀಡಬೇಕು ಎಂದರು.

ಜಿ.ಪಂ ಉಪ ಕಾರ್ಯದರ್ಶಿ ಡಾ. ವಿಜಯಕುಮಾರ ಅಜೂರ, ಜಿ.ಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ವೇದಿಕೆಯದ್ದರು. ತಾ.ಪಂ ಇಒ ನಂದೀಪ ರಾಠೋಡ, ಚಡಚಣ ಇಒ ಸಂಜಯ ಖಡಗೇಕರ ಇತರರಿದ್ದರು.