ಕೆಆರ್‌ಎಸ್ ಸಮೀಪದ ಜುವಾರಿ ಗಾರ್ಡ್‌ನ್ ಸಿಟಿಗೆ ಸ್ಥಳ ಪರಿಶೀಲನೆ ನಡೆಸಲು ತೆರಳಿದ್ದ ತಂಡದಲ್ಲಿ ಹುಲಿಕೆರೆ ಗ್ರಾಪಂ ಪಿಡಿಒ ನಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದರಾಜು, ಮಾಜಿ ಉಪಾಧ್ಯಕ್ಷ ಚಲುವರಾಜು, ಕೆ.ಆರ್.ಸಾಗರ ಗ್ರಾಪಂ ಸದಸ್ಯ ಮಂಜುನಾಥ್ ಹೋರಾಟಗಾರ ಶ್ರೀನಿವಾಸ್, ಕುಂಟೇಗೌಡ, ರಘು ಹುಲಿಕೆರೆ, ಎಂಎನ್‌ಪಿಎಂ ಕಾಲನಿ ನಿವಾಸಿಗಳು ಇದ್ದರು. 
ಜಿಲ್ಲೆ

ಪಿಡಿಒ, ಸ್ಥಳೀಯ ನಿವಾಸಿಗಳಿಗೆ ಧಮ್ಕಿ

ಲೋಕೇಶ್ ಮನು. ಡಿ

ಕೆ.ಆರ್.ಸಾಗರ: ಸಾರ್ವಜನಿಕರ ದೂರಿನ ಮೇರೆಗೆ ಸ್ಥಳ ಪರಿಶೀಲನೆಗೆ ತೆರಳಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸ್ಥಳೀಯರಿಗೆ ಅಪಾರ್ಟ್‌ಮೆಂಟ್‌ನ ಸ್ಥಳೀಯ ಮುಖ್ಯಸ್ಥ ಸೇರಿದಂತೆ ಹಲವರು ಧಮ್ಕಿ ಹಾಕಿದ್ದಾರೆ.


ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಜುವಾರಿ ಗಾರ್ಡ್‌ನ್ ಸಿಟಿ ಕಂಪನಿಯವರು ಮೂಲ ನಕ್ಷೆಯಲ್ಲಿರುವ ಬಂಡಿದಾರಿ ಒತ್ತುವರಿ ಮಾಡಿ ಸಾರ್ವಜನಿಕ ಉದ್ಯಾನ, ರಸ್ತೆಗೆ ಸೇರಿ ಕಾಂಪೌಂಡ್ ನಿರ್ಮಿಸಿದ್ದಾರೆ. ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿರುವ ಕಾರಣ ಮಳೆ ನೀರು ಸರಾಗವಾಗಿ ಹೊರ ಹೋಗದೆ ಮನೆಗಳಿಗೆ ನುಗ್ಗಿ ಅವಾಂತರವಾಗುತ್ತಿದೆ. ಅಲ್ಲದೆ ಮೂಲ ನಕ್ಷೆಯಲ್ಲಿನ ಬಂಡಿ ದಾರಿಯನ್ನು ಒತ್ತುವರಿ ಮಾಡಿಕೊಂಡು ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ಶಾಲೆ ಹಾಗೂ 2-3 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬಂಡಿದಾರಿ ರಸ್ತೆ ಮುಚ್ಚಿದ್ದು ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಹುಲಿಕೆರೆ ಗ್ರಾಪಂ ಪಿಡಿಒ ನಟೇಶ್ ಹಾಗೂ ಸ್ಥಳೀಯ ನಿವಾಸಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು. ನಂತರ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು. ಒತ್ತುವರಿಯಾಗಿರುವ ಬಂಡಿದಾರಿ ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇದೀಗ ನಡೆಯುತ್ತಿರುವ ಕಾಮಗಾರಿ ಕಾನೂನಿಗೆ ವಿರೋಧವಾಗಿರುವುದು ದಾಖಲೆಗಳ ಪ್ರಕಾರ ಮೇಲ್ನೋಟಕ್ಕೆ ಕಂಡು ಬಂದಿದ್ದು ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ಹೇಳಿದರು.


ಈ ವೇಳೆ ಜುವಾರಿ ಗಾರ್ಡ್‌ನ್ ಸಿಟಿ ಸ್ಥಳೀಯ ಮುಖ್ಯಸ್ಥ ಶ್ರೀನಿವಾಸ್ ಸೇರಿದಂತೆ ಇತರರು, ನಾವು ದಾಖಲೆಗಳ ಪ್ರಕಾರ ಕಾಮಗಾರಿ ನಡೆಸುತ್ತಿದ್ದೇವೆ. ಇದರಲ್ಲಿ ನಿಮಗೆ ವ್ಯತ್ಯಾಸವಿದ್ದರೆ ನೀವು ಕೋರ್ಟ್‌ನಲ್ಲಿ ದಾವೆ ಹಾಕಿಕೊಳ್ಳಿ ಎಂದು ಪಿಡಿಒ ಹಾಗೂ ಗ್ರಾಮಸ್ಥರಿಗೆ ಹಾರಿಕೆ ಉತ್ತರ ನೀಡಲು ಮುಂದಾದರು. ಇದರಿಂದ ಅಸಮಧಾನಗೊಂಡ ಸ್ಥಳೀಯರು ಮೊದಲು ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿದರು. ಈ ವೇಳೆ ಜುವಾರಿ ಗಾರ್ಡನ್ ಸಿಟಿ ಡೆವಲಪರ್ಸ್ ಅವರೊಂದಿಗೆ ಮಾತಿನ ಚಕಮಕಿ ನಡೆಯಿತು. ನಂತರ ಪಿಡಿಒ ಮೂಲ ನಕ್ಷೆಯಲ್ಲಿರುವಂತೆ ಕಾನೂನು ಪ್ರಕಾರ ಬಂಡಿದಾರಿಯಲ್ಲಿ ಯಾವುದೇ ಅನುಮತಿ ಪಡೆಯದೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸುವುದು ಅಪರಾಧ. ಕೂಡಲೇ ಸ್ಥಗಿತಗೊಳಿಸಿ. ದಾಖಲೆಗಳನ್ನು ತಂದು ನೀಡಿ ಪರಿಶೀಲಿಸುವೆ ಎಂದರು. ಆದರೆ, ಪಿಡಿಒ ಮಾತು ಆಲಿಸದ ಅಪಾರ್ಟ್‌ಮೆಂಟ್ ಮುಖ್ಯಸ್ಥ, ನೀವು ಬಂದು ನಮ್ಮ ಜಾಗದಲ್ಲಿ ಅಡ್ಡಿಪಡಿಸುತ್ತಿದ್ದೀರಿ. ನಿಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಹೊರ ಕಳುಹಿಸಿದ್ದಾರೆ.

ಹುಲಿಕೆರೆ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದರಾಜು, ಮಾಜಿ ಉಪಾಧ್ಯಕ್ಷ ಚಲುವರಾಜು, ಕೆ.ಆರ್.ಸಾಗರ ಗ್ರಾಪಂ ಸದಸ್ಯ ಮಂಜುನಾಥ್, ಹೋರಾಟಗಾರ ಶ್ರೀನಿವಾಸ್, ಕುಂಟೇಗೌಡ, ರಘು ಹುಲಿಕೆರೆ, ಎಂಎನ್‌ಪಿಎಂ ಕಾಲನಿ ನಿವಾಸಿಗಳು ಇದ್ದರು.