ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಯಾದವಾಡ ಮಾತನಾಡಿದರು. ತಾಪಂ ಇಒ ಮುರಳೀಧರ ದೇಶಪಾಂಡೆ ಇದ್ದರು. 
ಜಿಲ್ಲೆ

ಪಿಡಿಒ, ಕಾರ್ಯದರ್ಶಿ ಕೆಲಸ ತೃಪ್ತಿಕರವಾಗಿಲ್ಲ

ರಾಮದುರ್ಗ: ತಾಲೂಕಿನ ಪಿಡಿಒ, ಕಾರ್ಯದರ್ಶಿಗಳ ಕಾರ್ಯ ತೃಪ್ತಿಕರವಾಗಿಲ್ಲ. ಬಹುತೇಕರು ಕೇಂದ್ರ ಸ್ಥಾನದಲ್ಲಿದ್ದು ಜನರಿಗೆ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಶಾಸಕ ಮಹಾದೇವಪ್ಪ ಯಾದವಾಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ 37 ಗ್ರಾಪಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನ ಬಹುತೇಕ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿ, 14ನೇ ಹಣಕಾಸು ಯೋಜನೆ ಅನುಷ್ಠಾನ ಕಾರ್ಯ ಸಮರ್ಪಕವಾಗಿಲ್ಲ. ಈ ಸಂಬಂಧ ತನಿಖೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

2018ರ ಪೂರ್ವದಲ್ಲಿ ತಾಲೂಕಿಗೆ ವಸತಿ ಇಲಾಖೆಯಿಂದ 7 ಸಾವಿರಕ್ಕೂ ಅಧಿಕ ಮನೆಗಳು ಮಂಜೂರಾಗಿದ್ದವು. ಮಂಜೂರು ಮಾಡಿಸಿದವರೇ ಅವುಗಳನ್ನು ತಡೆ ಹಿಡಿದಿದ್ದರು. ಸರ್ಕಾರಕ್ಕೆ ಮನವಿ ಮಾಡಿ ಪುನಃ ಮಂಜೂರು ಮಾಡಿಸಲಾಗಿತ್ತು. ಈ ಅವಧಿಯಲ್ಲಿ ವಸತಿ ಯೋಜನೆಗಳ ಉಸ್ತುವಾರಿ ಸರಿಯಾಗಿ ಮಾಡದ ಪರಿಣಾಮ ಬ್ಲಾಕ್ ಆಗಿದ್ದು, 4 ಸಾವಿರ ಮನೆಗಳ ಯೋಜನೆಗೆ ಚಾಲನೆ ನೀಡಿದರೂ ಕೇವಲ 2 ಸಾವಿರ ಮನೆಗಳು ಪ್ರಗತಿ ಹಂತದಲ್ಲಿವೆ. ಇನ್ನೆರಡು ಸಾವಿರ ಮನೆಗಳು ಪಂಚಾಯಿತಿ ನೌಕರರ ನಿರ್ಲಕ್ಷ್ಯದಿಂದ ಮತ್ತೆ ಬ್ಲಾಕ್ ಆಗಿವೆ. ಇದಕ್ಕೆ ಪಿಡಿಒ ಮತ್ತು ಕಾರ್ಯದರ್ಶಿಗಳೇ ನೇರ ಹೊಣೆ ಎಂದರು.

ರಾಜ್ಯದಲ್ಲಿ ಪ್ರವಾಹಕ್ಕೆ ಸುಮಾರು 12 ಲಕ್ಷ ಮನೆಗಳಿಗೆ ಹಾನಿಯಾಗಿದ್ದು, ಅವುಗಳಲ್ಲಿ ಕೇವಲ ಮೂರು ಸಾವಿರ ಮನೆಗಳ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಅದರಂತೆ ತಾಲೂಕಿನ 1,301 ಮನೆಗಳಿಗೆ ಮಂಜೂರಾತಿ ದೊರಕಿದ್ದು, ಅವುಗಳ ಪೈಕಿ ಇನ್ನೂ 269 ಮನೆಗಳ ಕಟ್ಟಡ ಕಾರ್ಯ ಆರಂಭವಾಗಿಲ್ಲ ಎಂಬ ಮಾಹಿತಿ ಪಡೆದ ಶಾಸಕರು, ಬರುವ ದಿನಗಳಲ್ಲಿ ಅವುಗಳ ನಿರ್ಮಾಣಕ್ಕೆ ಪಿಡಿಒಗಳು ಮುಂದಾಗಬೇಕು ಎಂದು ಸೂಚಿಸಿದರು.

ಕುಡಿಯುವ ನೀರಿನ ತೊಂದರೆಯಾಗದಂತೆ ಪಿಡಿಒ ಗಳು ಕ್ರಮ ಕೈಗೊಳ್ಳಬೇಕು. ಇಲಾಖೆ ಅಧಿಕಾರಿಗಳ ಸಮನ್ವಯದೊಂದಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. 14ನೇ ಹಣಕಾಸು ಸೇರಿ ವಿವಿಧ ಯೋಜನೆಗಳ ಪ್ರಸಕ್ತ ವರ್ಷದ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಲು ಶಾಸಕರು ಸೂಚನೆ ನೀಡಿದರು.

ತಾಪಂ ಇಒ ಮುರಳೀಧರ ದೇಶಪಾಂಡೆ, ಎಇಇ ಶ್ರೀನಿವಾಸ ಮತ್ತು ಪಿಡಿಒಗಳು, ಕಾರ್ಯದರ್ಶಿಗಳು ಇದ್ದರು.